ಪೂಪಾಡಿಕಟ್ಟೆ: ಮುಂಜಾನೆ ಮನೆಯ ಅಂಗಳದಲ್ಲಿ ಪ್ರತ್ಯಕ್ಷವಾಯಿತು ದೈತ್ಯ ಮೊಸಳೆ; ನಿವಾಸಿಗಳಲ್ಲಿ ಆತಂಕ

(ನ್ಯೂಸ್‌ ಕಡಬ) newskadaba.com,ಮಾ.19 ಬಂಟ್ವಾಳ:  ನೇತ್ರಾವತಿ ನದಿ ತೀರದ ನಿವಾಸಿಯೊಬ್ಬರ ಮನೆಯ ಅಂಗಳಕ್ಕೆ ಸುಮಾರು 7 ಅಡಿ ಉದ್ದದ ಬೃಹತ್ ಮೊಸಳೆಯೊಂದು ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿದ ಘಟನೆ ಬುಧವಾರ ಮುಂಜಾನೆ ನಡೆದಿದೆ.ಬಂಟ್ವಾಳದ ಪೂಪಾಡಿಕಟ್ಟೆ ನೆಕ್ಕಿಲಾರು ನಿವಾಸಿ ರಾಜೇಶ್ ನಾಯಕ್ ಎಂಬುವವರ ಮನೆಯ ಅಂಗಳಕ್ಕೆ ಈ ಮೊಸಳೆ ಬಂದಿದೆ. ಇವರ ಮನೆ ನೇತ್ರಾವತಿ ನದಿಯಿಂದ ಸುಮಾರು 200 ಮೀಟರ್ ದೂರದಲ್ಲಿದೆ.

ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಮನೆಯ ಹೊರಗೆ ಅಸಾಮಾನ್ಯ ಶಬ್ದ ಕೇಳಿಬಂದಿದೆ.ಶಬ್ದ ಕೇಳಿ ಮನೆಯವರು ಹೊರಬಂದು ನೋಡಿದಾಗ, ಅಂಗಳದಲ್ಲಿ ಬೃಹತ್ ಗಾತ್ರದ ಮೊಸಳೆ ಇರುವುದು ಕಂಡುಬಂದಿದೆ.ಮನೆಯವರನ್ನು ಕಂಡು ಗಾಬರಿಗೊಂಡ ಮೊಸಳೆ, ಅಂಗಳದಿಂದ ಪಕ್ಕದ ತೋಟದ ಕಡೆಗೆ ತೆರಳಿದೆ ಎಂದು ತಿಳಿದುಬಂದಿದೆ.

ನದಿಯ ಸಮೀಪವಿರುವ ಜನವಸತಿ ಪ್ರದೇಶಗಳಿಗೆ ಮೊಸಳೆಗಳು ಲಗ್ಗೆ ಇಡುತ್ತಿರುವುದು ಸ್ಥಳೀಯರಲ್ಲಿ ಭಯ ಮೂಡಿಸಿದೆ. ಸದ್ಯಕ್ಕೆ ಈ ಘಟನೆಯ ಬಗ್ಗೆ ಅರಣ್ಯ ಇಲಾಖೆಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಎಂದು ಮನೆಯವರು ತಿಳಿಸಿದ್ದಾರೆ. ಆದರೆ, ನದಿ ತೀರದ ನಿವಾಸಿಗಳು ರಾತ್ರಿ ವೇಳೆಯಲ್ಲಿ ಜಾಗರೂಕರಾಗಿರುವಂತೆ ಸೂಚಿಸಲಾಗಿದೆ.

Scroll to Top