
(ನ್ಯೂಸ್ ಕಡಬ) newskadaba.com, ಸೆ.26 . ಬೆಂಗಳೂರು: ಟ್ರಾಫಿಕ್ ನಿಯಮ ಉಲ್ಲಂಘನೆ ತಡೆಗೆ ಅಳವಡಿಸಲಾಗಿರುವ ಕೃತಕ ಬುದ್ಧಿಮತ್ತೆ ಕ್ಯಾಮೆರಾವೊಂದು ವಿಚಿತ್ರ ಯಡವಟ್ಟು ಮಾಡಿದೆ. ಸ್ಕೂಟಿಯಲ್ಲಿ ಕೊಂಡೊಯ್ಯುತ್ತಿದ್ದ ಗಿಟಾರ್‌ಗೆ ‘ಹೆಲ್ಮೆಟ್ ಧರಿಸಿಲ್ಲ’ ಎಂದು ದಂಡ ವಿಧಿಸಿದ ಘಟನೆ ನಗರದಲ್ಲಿ ನಡೆದಿದೆ.
ಸೌವಿಕ್ ದತ್ತ ಎಂಬುವವರು ಹೆಬ್ಬಾಳದಿಂದ ಟಿನ್ ಫ್ಯಾಕ್ಟರಿ ಕಡೆಗೆ ತಮ್ಮ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಬೆನ್ನಿಗೆ ಗಿಟಾರ್ ಚೀಲವನ್ನು ತಗಲಿಸಿಕೊಂಡಿದ್ದರು. ರಸ್ತೆಯಲ್ಲಿದ್ದ ಎಐ ಕ್ಯಾಮೆರಾ, ಬೆನ್ನಿನಲ್ಲಿದ್ದ ಗಿಟಾರ್ ಅನ್ನು ಹಿಂಬದಿ ಸವಾರ ಎಂದು ತಪ್ಪಾಗಿ ಗುರುತಿಸಿ, ಹೆಲ್ಮೆಟ್ ಹಾಕಿಲ್ಲ ಎಂಬ ಕಾರಣಕ್ಕೆ ಚಲನ್ ಜಾರಿಗೊಳಿಸಿದೆ.
ಫೋಟೋ ಸಮೇತ ಆನ್‌ಲೈನ್ ಚಲನ್ ಬಂದಿದ್ದನ್ನು ನೋಡಿ ಶಾಕ್ ಆದ ಸವಾರ, ಈ ಎಐ ಯಡವಟ್ಟನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪ್ರಸ್ತುತ ಈ ವಿಷಯ ವೈರಲ್ ಆಗಿದ್ದು, ಸಂಚಾರ ಪೊಲೀಸರು ಸವಾರನಿಗೆ ತಮ್ಮನ್ನು ಸಂಪರ್ಕಿಸಲು ಸೂಚಿಸಿದ್ದಾರೆ.




