(ನ್ಯೂಸ್ ಕಡಬ) newskadaba.com, ಮಾ.17 ದ್ವಿಚಕ್ರ ವಾಹನಕ್ಕೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಐದು ವರ್ಷದ ಬಾಲಕಿಯೊಬ್ಬಳು ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಉಪ್ಪಿನಂಗಡಿ ಸಮೀಪದ ಕಲ್ಲೇರಿಯಲ್ಲಿ ಸೋಮವಾರ ಸಂಭವಿಸಿದೆ….
ತಣ್ಣಿರುಪಂತ ಗ್ರಾಮದ ಕೊಡಂಗೆ ನಿವಾಸಿ ಇಸ್ಮಾಯಿಲ್ ಅವರು ತಮ್ಮ ಮಗಳು ಸಾಜಿರಾ ಮತ್ತು ಮೊಮ್ಮಗಳು ಸುಹೈರಾ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಕಲ್ಲೇರಿಯಿಂದ ಕುಪ್ಪೆಟ್ಟಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ವೇಣೂರು ಮೂಲದ ಶಿವಪ್ರಸಾದ್ ಎಂಬುವವರು ಚಲಾಯಿಸುತ್ತಿದ್ದ ಕಾರು ವಿರುದ್ಧ ದಿಕ್ಕಿನಿಂದ ಬಂದು ಇವರ ವಾಹನಕ್ಕೆ ಢಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಬಾಲಕಿ ಸುಹೈರಾ ಗಂಭೀರವಾಗಿ ಗಾಯಗೊಂಡಿದ್ದರೆ, ಆಕೆಯ ತಾಯಿ ಸಾಜಿರಾ (33) ಮತ್ತು ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಅಜ್ಜ ಇಸ್ಮಾಯಿಲ್ (60) ಅವರಿಗೂ ಗಾಯಗಳಾಗಿವೆ. ಕೂಡಲೇ ಮೂವರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ, ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಸುಹೈರಾ ಸೋಮವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.








