(ನ್ಯೂಸ್ ಕಡಬ) newskadaba.com ನವದೆಹಲಿ, ಜು.08. ರೈತರು ಬೆಳೆ ನಷ್ಟ ಅನುಭವಿಸಿದ ಸಂದರ್ಭದಲ್ಲಿ ಬ್ಯಾಂಕ್‌ಗಳು ಅಥವಾ ಇನ್ನಿತರ ಯಾವುದೇ ಹಣಕಾಸು ಸಂಸ್ಥೆಗಳು ಸಾಲ ಮರುಪಾವತಿ ಮಾಡುವಂತೆ ಬಲವಂತಪಡಿಸಬಾರದು. ಇಂಥಹ ಸಂದರ್ಭದಲ್ಲಿ ಸರ್ಕಾರಗಳು ರೈತರ ನೆರವಿಗೆ ಧಾವಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಅಲ್ಲದೆ, ರೈತರ ಆತ್ಮಹತ್ಯೆಗಳನ್ನು ತಡೆಯುವುದು ಸರ್ಕಾರದ ಜವಾಬ್ದಾರಿಯಾಗಬೇಕೇ ಹೊರತು ಪರಿಹಾರ ಹಂಚಿಕೆ ಮಾಡುವುದಲ್ಲ ಎಂದು ಕೇಂದ್ರಕ್ಕೆ ಸುಪ್ರೀಂ ಚಾಟಿ ಬೀಸಿದೆ. ಈ ಬಗ್ಗೆ ತಮಿಳುನಾಡು ರೈತರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಎ.ಎಂ.ಖಾನ್ವಿಲ್ಕರ್ ನೇತೃತ್ವದ ಪೀಠ, ‘ಬೆಳೆ ನಷ್ಟ ಅನುಭವಿಸಿದ ವೇಳೆ ಸಾಲ ಮರು ಪಾವತಿ ವಿಚಾರದಲ್ಲಿ ಬ್ಯಾಂಕ್‌ಗಳು ರೈತರ ವಿರುದ್ಧ ಕ್ರಮ ಕೈಗೊಳ್ಳಬಾರದು. ಒಂದು ವೇಳೆ ಬ್ಯಾಂಕ್‌ಗಳು ರೈತರ ವಿರುದ್ಧ ಕ್ರಮಕ್ಕೆ ಮುಂದಾದಾಗ ಸರ್ಕಾರ ಕಾರ್ಯಪ್ರವೃತ್ತವಾಗಬೇಕು’ ಎಂದು ಹೇಳಿದೆ. ರೈತರ ಬೆಳೆಗಳನ್ನು ಕನಿಷ್ಠ ಬೆಲೆಗೆ ಖರೀದಿಸುವ ಮಧ್ಯವರ್ತಿಗಳನ್ನು ತೊಲಗಿಸಲು ಸರ್ಕಾರ ಆಡಳಿತಾತ್ಮಕ ಕ್ರಮ ಕೈಗೊಂಡು, ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ ಖರೀದಿಸಬೇಕು ಎಂದು ಸುಪ್ರೀಂ ಹೇಳಿದೆ. ಅಲ್ಲದೆ, ಈ ಬಗ್ಗೆ ವಿಸ್ತೃತ ಪ್ರತಿಕ್ರಿಯೆ ನೀಡುವಂತೆ ತಮಿಳುನಾಡು ಸರ್ಕಾರಕ್ಕೆ ಸೂಚಿಸಿ ಮುಂದಿನ ವಿಚಾರಣೆಯನ್ನು ಆ.4ಕ್ಕೆ ಮುಂದೂಡಲಾಗಿದೆ.