(ನ್ಯೂಸ್ ಕಡಬ) newskadaba.com, ಡಿ.05 : ಪ್ರಾಥಮಿಕ ಶಾಲಾ ಶಿಕ್ಷಕರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಸಂಬಂಧಪಟ್ಟ ವಿಷಯಗಳಲ್ಲಿ ಪದವಿ ಪಡೆದಿರುವ ಪ್ರಾಥಮಿಕ ಶಾಲಾ ಶಿಕ್ಷಕರು, 1 ರಿಂದ 5ನೇ ತರಗತಿಗಳಿಗೆ ಬೋಧನೆ ಮಾಡಲು ಟಿಇಟಿ ಪ್ರಮಾಣಪತ್ರ ಕಡ್ಡಾಯ ಎಂಬ ಷರತ್ತಿನಿಂದ ವಿನಾಯಿತಿ ನೀಡಲಾಗಿದೆ. ಆದರೆ, 6ನೇ ಮತ್ತು 7ನೇ ತರಗತಿಗಳಿಗೆ ಹಾಗೂ ಅದಕ್ಕಿಂತ ಮುಂದುವರಿದ ತರಗತಿಗಳ ಶಿಕ್ಷಕರು ಟಿಇಟಿ ಪ್ರಮಾಣಪತ್ರ ಹೊಂದಿರುವುದು ಅಗತ್ಯವಾಗಿದೆ. ಈ ಬಗ್ಗೆ ರಾಜ್ಯ ಸಚಿವ ಸಂಪುಟದಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.
ಟಿಇಟಿ (ಶಿಕ್ಷಕರ ಅರ್ಹತಾ ಪರೀಕ್ಷೆ) ಪ್ರಮಾಣಪತ್ರ ಹೊಂದಿರಬೇಕೆಂಬ ಷರತ್ತನ್ನು ಕೈಬಿಟ್ಟು 6 ಮತ್ತು 7ನೇ ತರಗತಿಗಳಿಗೆ ಬೋಧಿಸಲು ಅನುವಾಗುವಂತೆ ತಿದ್ದುಪಡಿ ಮಾಡಿ ಇದೇ ಅ. 16ರಂದು ಹೊರಡಿಸಿದ್ದ ವೃಂದ ಮತ್ತು ನೇಮಕಾತಿ (ತಿದ್ದುಪಡಿ) ಕರಡು ನಿಯಮಗಳಿಗೆ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು, 1ರಿಂದ 5ನೇ ತರಗತಿವರೆಗೆ ಬೋಧನೆ ಮಾಡುವ ಶಿಕ್ಷಕರು ಅಗತ್ಯ ವಿಷಯಗಳಲ್ಲಿ ಪದವಿ ಹೊಂದಿದ್ದರೆ ಅಂಥವರಿಗೆ ಟಿಇಟಿ ಕಡ್ಡಾಯ ಎಂಬ ಷರತ್ತನ್ನು ಸಡಿಲಗೊಳಿಸಲಾಗುವುದು. ಅಂತಹ ಶಿಕ್ಷಕರಿಗೆ ಬೋಧನೆಗೆ ಅವಕಾಶ ಮಾಡಿಕೊಡಲು 2025ರ ಅ.16ರಂದು ಹೊರಡಿಸಲಾದ ಕರಡು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸಂಪುಟ ಸಭೆ ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದ್ದಾರೆ.












