(ನ್ಯೂಸ್ ಕಡಬ) newskadaba.com, ಜು.01: ಬೆಂಗಳೂರು ಮೆಟ್ರೋ ಜಾಲದಲ್ಲಿ ಇತ್ತೀಚೆಗೆ ಪದೇ ಪದೇ ಸಂಭವಿಸುತ್ತಿರುವ ತಾಂತ್ರಿಕ ದೋಷ ಹಾಗೂ ಸೇವಾ ವ್ಯತ್ಯಯಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ರೈಲ್ವೆ ಸುರಕ್ಷತಾ ಮುಖ್ಯ ಆಯುಕ್ತರು,ಈ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಬಿಎಂಆರ್‌ಸಿಎಲ್‌ಗೆ ಆದೇಶಿಸಿದ್ದಾರೆ.
ಜೂನ್ 23 ರಂದು ಪರ್ಪಲ್ ಲೈನ್‌ನಲ್ಲಿ ಉಂಟಾಗಿದ್ದ ತಾಂತ್ರಿಕ ದೋಷದ ಕುರಿತು ತನಿಖೆ ನಡೆಸುವಂತೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಜೂನ್ 25 ರಂದು ರೈಲ್ವೆ ಸುರಕ್ಷತಾ ಆಯುಕ್ತರಿಗೆ ಅಧಿಕೃತ ಪತ್ರ ಬರೆದಿದ್ದರು.ಸಂಸದರ ಪತ್ರಕ್ಕೆ ಉತ್ತರಿಸಿರುವ ಮುಖ್ಯ ರೈಲ್ವೆ ಸುರಕ್ಷತಾ ಆಯುಕ್ತ ಜನಕ್ ಕುಮಾರ್ ಗರ್ಗ್, ಕೇವಲ ಜೂನ್ 23ರ ಘಟನೆ ಮಾತ್ರವಲ್ಲದೆ, ಕಳೆದ 3 ವರ್ಷಗಳಲ್ಲಿ ಸಂಭವಿಸಿರುವ ಎಲ್ಲಾ ಸರಣಿ ವ್ಯತ್ಯಯಗಳ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದಾರೆ.
2024ರಿಂದೀಚೆಗೆ ನಮ್ಮ ಮೆಟ್ರೋದಲ್ಲಿ ಬರೋಬ್ಬರಿ 20 ಬಾರಿ ಸೇವಾ ವ್ಯತ್ಯಯಗಳು ವರದಿಯಾಗಿದ್ದು, ಪ್ರಯಾಣಿಕರ ಸುರಕ್ಷತೆ ಮತ್ತು ವಿಶ್ವಾಸವನ್ನು ಪುನಃಸ್ಥಾಪಿಸಲು ರಾಜ್ಯ ಸರ್ಕಾರ ಹಾಗೂ ಮೆಟ್ರೋ ಆಡಳಿತ ಮಂಡಳಿ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ತೇಜಸ್ವಿ ಸೂರ್ಯ ಒತ್ತಾಯಿಸಿದ್ದಾರೆ.









