(ನ್ಯೂಸ್ ಕಡಬ) newskadaba.com, ನ.17 ಮೂಲ್ಕಿ– ಕಟೀಲು ಮೇಳಗಳ ಎಲ್ಲ ಕಲಾವಿದರಿಗೆ ಈ ಬಾರಿ ಅಂಚೆ ಇಲಾಖೆಯ ಅಪಘಾತ ವಿಮೆಯ ಜೊತೆಗೆ ೨ ಲಕ್ಷ ರು.ಗಿಂತ ಮೇಲ್ಪಟ್ಟ ೧೫ ಲಕ್ಷ ರು.ವರೆಗಿನ ಆರೋಗ್ಯ ವಿಮೆಯನ್ನೂ ಅಂಚೆ ಇಲಾಖೆಯ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸಹಭಾಗಿತ್ವದಲ್ಲಿ ಮಾಡಲಾಗುವುದು ಎಂದು ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ ಪ್ರಕಟಿಸಿದ್ದಾರೆ.
ಕಟೀಲು ಸರಸ್ವತೀ ಸದನದಲ್ಲಿ ಕಟೀಲು ದೇವಳದ ೭ನೆಯ ಮೇಳದ ಪಾದಾರ್ಪಣೆಯ ಅಂಗವಾಗಿ ನಡೆದ ಯಕ್ಷಸಪ್ತಾಹದ ಆರನೆಯ ದಿನ ಗುರುವಾರ ನಡೆದ ಕಲಾವಿದರ ಸಮಾವೇಶದಲ್ಲಿ, ಅಪಘಾತದಲ್ಲಿ ಮೃತಪಟ್ಟ ದಿ. ಆನಂದ ಅವರ ಪತ್ನಿಗೆ ಅಪಘಾತ ವಿಮೆಯ ಪರಿಹಾರ ಧನ ರು. ೧೦ಲಕ್ಷವನ್ನು ವಿತರಿಸಿ ಮಾತನಾಡಿದರು..
ಕಲಾವಿದರ ಪರವಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ ಮಾತನಾಡಿ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುವ ಭಾಗ್ಯ ನಮಗೆಲ್ಲ ಸಿಕ್ಕಿದ್ದು ಮೇಳದ ಯಜಮಾನರು ಕಾರ್ಯಾಗಾರ, ಸವಲತ್ತು, ಸಮಾವೇಶ, ವಿಮೆ ಹೀಗೆ ಎಲ್ಲ ಸೌಕರ್ಯಗಳನ್ನು ಮಾಡಿಕೊಡುತ್ತಿರುವಾಗ ಪ್ರೀತಿ ಮತ್ತು ಭಕ್ತಿಯಿಂದ ನಾವು ಮೇಳದಲ್ಲಿ ಕಾರ್ಯನಿರ್ವಹಿಸಬೇಕಾದ ಜವಾಬ್ದಾರಿಯನ್ನು ಅರಿತುಕೊಂಡು ಕಟೀಲು ಕ್ಷೇತ್ರದ ಗೌರವವನ್ನು ಹೆಚ್ಚಿಸಬೇಕಾಗಿದೆ ಎಂದರು.ರವಿ ಮುಂಡಾಜೆ, ದಿನಕರ ಗೋಖಲೆ ಮುಂತಾದವರು ಕಲಾವಿದರ ಪರವಾಗಿ ಮಾತನಾಡಿದರು. ಗುರುತೇಜ ಕೃಷ್ಣ ನಿರೂಪಿಸಿದರು.
:ಕಟೀಲು ಮೇಳದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಕೋಳ್ಯೂರು ರಾಮಚಂದ್ರ ರಾವ್, ರೆಂಜಾಳ ರಾಮಕೃಷ್ಣ ರಾವ್,ಮುಂಡ್ಕೂರು ಜಯರಾಮ ಶೆಟ್ಟಿ, ಕುರಿಯ ಗಣಪತಿ ಶಾಸ್ತ್ರಿ, ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ, ಇರಾ ಭಾಗವತರ ಪುತ್ರ ಜಯರಾಮ ರಾವ್ ಮತ್ತಿತರರು ಉಪಸ್ಥಿತರಿದ್ದರು.








