(ನ್ಯೂಸ್ ಕಡಬ) newskadaba.com, ಜು. 08. ಮಂಗಳವಾರ ಬೆಳಗ್ಗೆ 7:45 ರ ಸುಮಾರಿಗೆ ತಮಿಳು ನಾಡಿನ ಕಡಲೂರಿನಿಂದ ದಕ್ಷಿಣಕ್ಕೆ 10 ಕಿಲೋಮೀಟರ್ ದೂರದಲ್ಲಿರುವ ಸೆಮ್ಮಂಕುಪ್ಪಂನಲ್ಲಿ ಮಾನವಸಹಿತ ಲೆವೆಲ್ ಕ್ರಾಸಿಂಗ್ ದಾಟಲು ಯತ್ನಿಸುತ್ತಿದ್ದ ಶಾಲಾ ವ್ಯಾನ್ಗೆ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಮತ್ತು ಒಬ್ಬರು ದಾರಿಹೋಕರು ಮೃತಪಟ್ಟಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಸುಮಾರು 10 ಮಂದಿ ಗಂಭೀರ ಗಾಯಗೊಂಡಿದ್ದು, ಅವರನ್ನು ಕಡಲೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಶಾಲಾ ವ್ಯಾನ್ ತೀವ್ರವಾಗಿ ನಜ್ಜುಗುಜ್ಜಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮೃತ ಇಬ್ಬರು ಮಕ್ಕಳನ್ನು ತೊಂಡಮನಾಥಂನ ನಿವಾಸ್ (12ವ) ಮತ್ತು ಸುಬ್ರಮಣಿಯಪುರಂನ ಡಿ. ಚಾರುಮತಿ (16ವ) ಎಂದು ಗುರುತಿಸಲಾಗಿದೆ. ಅಪಘಾತದ ಸಮಯದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲಿದ್ದ ಸೆಮ್ಮಂಕುಪ್ಪಂನ ಅಣ್ಣಾದೊರೈ ಎಂಬ 55 ವರ್ಷದ ವ್ಯಕ್ತಿ ಕೂಡ ಮೃತಪಟ್ಟಿದ್ದಾರೆ.














