(ನ್ಯೂಸ್ ಕಡಬ) newskadaba.com ಜು. 07, ಬೆಂಗಳೂರು: ಚೀಟಿಯಲ್ಲಿ ಹೂಡಿಕೆ ಮಾಡಿದ್ದ ಸಾರ್ವಜನಿಕರ ಕೋಟ್ಯಂತರ ರೂಪಾಯಿ ಹಣದೊಂದಿಗೆ ಪರಾರಿಯಾದ ದಂಪತಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಂತ್ರಸ್ತರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಅವರಿಗೆ ದೂರು ನೀಡಿದ್ದಾರೆ.
ಜೆ.ಪಿ ನಗರದ ನಾಲ್ವರು ಜನರ ಕುಟುಂಬವೊಂದು 250 ಕ್ಕೂ ಹೆಚ್ಚು ಜನರನ್ನು ವಂಚಿಸಿ ಪರಾರಿಯಾಗಿದೆ ಎಂದು ಆರೋಪಿಸಲಾಗಿದೆ. ಪುಟ್ಟೇನಹಳ್ಳಿ ನಿವಾಸಿ ಪುಷ್ಪಲತಾ ವಿ (45) ಎಂಬುವರು ಸುಧಾ, ಅವರ ಪತಿ ಸಿದ್ಧಾಚಾರಿ, ಮಗ ಯಶವಂತ್ ಮತ್ತು ಮಗಳು ವರ್ಷಿಣಿ ವಿರುದ್ಧ ದೂರು ದಾಖಲಿಸಿದ್ದಾರೆ. ಕುಟುಂಬವು ತಮ್ಮ ಜರಗನಹಳ್ಳಿ ಮನೆಯನ್ನು ಖಾಲಿ ಮಾಡಿ 40 ವಿವಿಧ ಮೊತ್ತದ ಚೀಟಿಯಲ್ಲಿ ಹೂಡಿಕೆದಾರರಿಂದ ಹಣ ಸಂಗ್ರಹಿಸಿ ನಾಪತ್ತೆಯಾಗಿದೆ.
ಕುಟುಂಬವು ಪರವಾನಗಿ ಇಲ್ಲದೆ 25 ವರ್ಷಗಳಿಂದ ಅಕ್ರಮ ಚೀಟಿ ವ್ಯವಹಾರವನ್ನು ನಡೆಸುತ್ತಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಸುಮಾರು 250 ರಿಂದ 300 ಜನರು ಕುಟುಂಬಕ್ಕೆ ಮಾಸಿಕ ಮೊತ್ತವನ್ನು ಪಾವತಿಸುತ್ತಿದ್ದರು ಎಂದು ಸಂತ್ರಸ್ತರು ಪೊಲೀಸರಿಗೆ ತಿಳಿಸಿದ್ದಾರೆ, ಅವರು ಸುಮಾರು 40 ವಿಭಿನ್ನ ಚಿಟ್ ಫಂಡ್ ಬ್ಯಾಚ್‌ಗಳನ್ನು ನಿರ್ವಹಿಸುತ್ತಿದ್ದರು.













