ಸಮುದ್ರದಲ್ಲಿ ಮುಳುಗುತ್ತಿದ್ದ ‘ಮಂಜುಮಾತಾ’ ಬೋಟ್: ಆರೂ ಮೀನುಗಾರರು ಸುರಕ್ಷಿತ ರಕ್ಷಣೆ

(ನ್ಯೂಸ್‌ ಕಡಬ) newskadaba.com, ಜೂ.30 ಮಂಗಳೂರು ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ ಹವಾಮಾನದಿಂದಾಗಿ ಮುಳುಗುತ್ತಿದ್ದ ಮೀನುಗಾರಿಕಾ ಬೋಟ್‌ನಲ್ಲಿದ್ದ ಆರು ಮಂದಿ ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ ಯಶಸ್ವಿಯಾಗಿ ರಕ್ಷಿಸಿದ್ದಾರೆ.

‘ಐಎಫ್‌ಬಿ ಮಂಜುಮಾತಾ’ ಎಂಬ ಬೋಟ್‌ನಲ್ಲಿ ಮೀನುಗಾರರು ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ, ದೈತ್ಯ ಅಲೆಗಳ ಹೊಡೆತಕ್ಕೆ ಸಿಲುಕಿ ಬೋಟ್‌ನೊಳಗೆ ನೀರು ತುಂಬಿ ಮುಳುಗಲಾರಂಭಿಸಿತು.ಮಾಹಿತಿ ತಿಳಿಯುತ್ತಿದ್ದಂತೆ ಕಡಲ ಕಾವಲು ಪಡೆಯ ಹಡಗು ಐಸಿಜಿಎಸ್ ಸಚೇತ್’ ಮೂಲಕ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ, ತೀವ್ರ ಅಲೆಗಳ ನಡುವೆಯೂ ಅತ್ಯಾಧುನಿಕ ರಿಮೋಟ್-ಆಪರೇಟೆಡ್ ಲೈಫ್‌ಬಾಯ್ಸ್’ ತಂತ್ರಜ್ಞಾನವನ್ನು ಬಳಸಿ ಆರೂ ಜನರನ್ನು ರಕ್ಷಿಸಿದರು.

ರಕ್ಷಿಸಲ್ಪಟ್ಟ ಮೀನುಗಾರರನ್ನು ಮಂಗಳೂರಿನ ನ್ಯೂ ಮಂಗಳೂರು ಬಂದರಿಗೆ ಕರೆತರಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ಹಾಗೂ ಅಗತ್ಯ ನೆರವು ನೀಡಲಾಗಿದೆ. ಸದ್ಯ ಎಲ್ಲಾ ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದು, ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Scroll to Top