(ನ್ಯೂಸ್ ಕಡಬ) newskadaba.com, ಜೂ.30 ವಿದ್ಯಾರ್ಥಿಗಳ ಕೊರತೆಯಿಂದಾಗಿ ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ಮೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು 2026-27ನೇ ಶೈಕ್ಷಣಿಕ ವರ್ಷದಲ್ಲಿ ಬಿಎ (BA) ಕೋರ್ಸ್‌ಗಳ ಹೊಸ ಬ್ಯಾಚ್‌ಗಳನ್ನು ಆರಂಭಿಸದಿರಲು ನಿರ್ಧರಿಸಿವೆ.
ಸೋಮವಾರ ನಡೆದ ಮಂಗಳೂರು ವಿಶ್ವವಿದ್ಯಾಲಯದ ಈ ವರ್ಷದ ಮೊದಲ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.ಕುಲಪತಿ ಪ್ರೊ. ಪಿ.ಎಲ್. ಧರ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ರಾಜ್ಯ ಸರ್ಕಾರದ ಆದೇಶದಂತೆ ಮಂಗಳೂರಿನ ಕಾವೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ, ಇತಿಹಾಸ ಮತ್ತು ಸಮಾಜಶಾಸ್ತ್ರ, ಪತ್ರಿಕೋದ್ಯಮ ಹಾಗೂ ಕನ್ನಡ ವಿಷಯಗಳ ಬಿಎ ಹೊಸ ಬ್ಯಾಚ್‌ಗಳನ್ನು ಆರಂಭಿಸದಿರಲು ನಿರ್ಧರಿಸಲಾಯಿತು.
ಅದೇ ರೀತಿ, ಪುಂಜಾಲಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ, ಕನ್ನಡ ಮತ್ತು ಸಮಾಜಶಾಸ್ತ್ರ ವಿಭಾಗಗಳ ಬಿಎ ಕೋರ್ಸ್ ಸ್ಥಗಿತಗೊಳ್ಳಲಿದೆ.ಉಡುಪಿಯ ಅಜ್ಜರಕಾಡಿನ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಇಂಗ್ಲಿಷ್, ಇತಿಹಾಸ ಹಾಗೂ ರಾಜಕೀಯ ವಿಜ್ಞಾನ ವಿಷಯಗಳ ಹೊಸ ಬ್ಯಾಚ್‌ಗಳನ್ನೂ ಈ ವರ್ಷ ಆರಂಭಿಸದಿರಲು ನಿರ್ಧರಿಸಲಾಗಿದೆ.









