(ನ್ಯೂಸ್ ಕಡಬ) newskadaba.com, ಜೂ.30 ಸುಳ್ಯ: ಇಲ್ಲಿನ ಸರಕಾರಿ ಆಸ್ಪತ್ರೆಯ ಪಕ್ಕದ ರಿಕ್ಷಾ ನಿಲ್ದಾಣದಿಂದ ಜೂನಿಯರ್ ಕಾಲೇಜು ಸಂಪರ್ಕಿಸುವ ರಸ್ತೆಯ ಮಧ್ಯದಲ್ಲಿದ್ದ ವಿದ್ಯುತ್ ಕಂಬಗಳನ್ನು ತೆರವುಗೊಳಿಸದೆ ಕಾಂಕ್ರೀಟ್ ರಸ್ತೆ ನಿರ್ಮಿಸಿರುವ ಅವೈಜ್ಞಾನಿಕ ಕಾಮಗಾರಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದ್ದವು. ಈ ಹಿನ್ನೆಲೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರು ಮೆಸ್ಕಾಂ ಅಧಿಕಾರಿಗಳೊಂದಿಗೆ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಸ್ತೆ ಮಧ್ಯೆ ಕಂಬಗಳನ್ನಿಟ್ಟುಕೊಂಡೇ ಕಾಂಕ್ರೀಟ್ ಮಾಡಿರುವುದು ಅತ್ಯಂತ ಅಪಾಯಕಾರಿ ಮತ್ತು ಅವೈಜ್ಞಾನಿಕ ಎಂದು ಆಕ್ರೋಶ ವ್ಯಕ್ತಪಡಿಸಿದ ಶಾಸಕರು, ಮೆಸ್ಕಾಂ ಇಲಾಖೆ ಹಾಗೂ ಗುತ್ತಿಗೆದಾರರು ತಕ್ಷಣವೇ ಸಮನ್ವಯ ಸಾಧಿಸಿ ಕಂಬಗಳನ್ನು ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಕಡಕ್ ಸೂಚನೆ ನೀಡಿದರು.
“ಇದು ಸರಕಾರ ನಿರ್ಮಿಸಿರುವ ರಸ್ತೆಯಲ್ಲ. ಲೇಔಟ್ ಮಾಲೀಕರು ಖಾಸಗಿಯಾಗಿ ನಿರ್ಮಿಸಿರುವ ರಸ್ತೆಯಾಗಿದ್ದು, ಇದಕ್ಕೆ ಸ್ಥಳೀಯ ಸಂಸ್ಥೆಗಳಿಂದಾಗಲಿ ಅಥವಾ ಮೆಸ್ಕಾಂನಿಂದಾಗಲಿ ಯಾವುದೇ ಅಧಿಕೃತ ಅನುಮತಿ ಪಡೆದಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ” ಎಂದು ಶಾಸಕಿ ಭಾಗೀರಥಿ ಮುರುಳ್ಯ ಸ್ಪಷ್ಟಪಡಿಸಿದರು.









