ಗ್ರಾಮ ಪಂಚಾಯತ್ ಸಭೆಯಲ್ಲಿ ತುಳು ಭಾಷೆ ಬಳಸದಂತೆ ಪತ್ರ- ಆಕ್ರೋಶ



(ನ್ಯೂಸ್ ಕಡಬ) newskadaba.com ಜೂ. 21. ಒಂದು ಕಡೆ ತುಳು ಭಾಷೆಗೆ ರಾಜ್ಯ ಭಾಷೆಯ ಸ್ಥಾನಮಾನ ನೀಡಬೇಕೆಂಬ ಆಗ್ರಹ- ಹೋರಾಟ ನಡೆಯುತ್ತಿದ್ದು, ಈ ವೇಳೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನಿಂದ ತಾಲೂಕು ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕಳುಹಿಸಲಾದ ಪತ್ರವೊಂದು ವೈರಲ್ ಆಗುತ್ತಿದ್ದು, ಚರ್ಚೆಗೆ ಕಾರಣವಾಗಿದೆ.







 

ಗ್ರಾಮ ಪಂಚಾಯತ್‌ಗಳಲ್ಲಿ ನಡೆಯುವ ಸಾಮಾನ್ಯ ಸಭೆಯಲ್ಲಿ ತುಳು ಭಾಷೆಯಲ್ಲಿ ಚರ್ಚೆಗೆ ಅವಕಾಶ ನೀಡುವ ಬದಲು ಕನ್ನಡ ಭಾಷೆಗೆ ಪ್ರಾಮುಖ್ಯ ನೀಡಬೇಕೆಂಬ ಕಾರ್ಕಳದ ನಾಗರೀಕ ಸೇವಾ ಸಂಘದ ಸಂಚಾಲಕ ಮುರಳೀಧರ್‌ ಎಂಬವರ ಪತ್ರದ ಚರ್ಚೆಯ ಹಿನ್ನೆಲೆ ಜಿ.ಪಂ. ಸಿಇಒ ಅವರಿಗೆ ಬರೆದಿರುವ ಪತ್ರದಲ್ಲಿ, ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಚರ್ಚಿಸುವಾಗ ತುಳು ಭಾಷೆ ಬಳಸದೇ ಕನ್ನಡಕ್ಕೆ ಪ್ರಾಮುಖ್ಯ ನೀಡಲು ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಲಾಗಿತ್ತು.






ಪತ್ರಕ್ಕೆ ಪ್ರತಿಯಾಗಿ ಜಿ.ಪಂ. ಕಾರ್ಯಾಲಯವು ಎಲ್ಲಾ ತಾ.ಪಂ. ಇಒ ಗಳಿಗೆ, ಸಂಘದ ಮನವಿಯನ್ನು ಪ್ರಸ್ತಾಪಿಸಿ ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ. ಈ ಪತ್ರ ಬಹಿರಂಗಗೊಳ್ಳುತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.ಈ ವಿಚಾರವಾಗಿ ಸಂಬಂಧಪಟ್ಟ ಇಲಾಖೆ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿಬರುತ್ತಿದೆ.

error: Content is protected !!
Scroll to Top