(ನ್ಯೂಸ್ ಕಡಬ) newsksdaba.com ಮಂಗಳೂರು, ಜೂ. 19. ಕೆಲಸದ ಸಮಯದ ಗರಿಷ್ಠ ಮಿತಿಯನ್ನು ಪ್ರಸ್ತುತ 9 ಗಂಟೆಗಳಿಂದ 10 ಗಂಟೆಗೆ ಏರಿಸಲು ಮತ್ತು ಹೆಚ್ಚಿನ ಓವರ್ ಟೈಮ್ ಸಮಯವನ್ನು ಅನುಮತಿಸಲು ಪ್ರಸ್ತಾಪಿಸಿ, ರಾಜ್ಯ ಸರ್ಕಾರವು ಮಹತ್ವದ ಬದಲಾವಣೆಯೊಂದಕ್ಕೆ ಮುಂದಾಗಿರುವುದಾಗಿ ವರದಿಯಾಗಿದೆ.
ರಾಜ್ಯ ಸರ್ಕಾರವು ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆ ಕಾಯ್ದೆ, 1961 ಕ್ಕೆ ತಿದ್ದುಪಡಿ ತರುವ ಮೂಲಕ ಈ ಬದಲಾವಣೆಗಳನ್ನು ತರಲು ಪ್ರಯತ್ನಿಸುತ್ತಿರುವುದಾಗಿ ತಿಳಿದುಬಂದಿದೆ.
ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 1961ರ ಸೆಕ್ಷನ್ 7ರ ಪ್ರಕಾರ, ಕೆಲಸದ ಅವಧಿ ದಿನಕ್ಕೆ ಒಂಬತ್ತು ಗಂಟೆಯನ್ನು ಮೀರಬಾರದು ಮತ್ತು ಗರಿಷ್ಠ ಹೆಚ್ಚುವರಿ ಅವಧಿ (ಒಟಿ) 10 ಗಂಟೆಗಳನ್ನು ಮೀರಬಾರದು. ಇದನ್ನು ಗಮನದಲ್ಲಿಟ್ಟುಕೊಂಡು ಉದ್ದೇಶಿತ ತಿದ್ದುಪಡಿಯ ಮೂಲಕ, ಕೆಲಸದ ಅವಧಿಯನ್ನು ದಿನಕ್ಕೆ ಗರಿಷ್ಠ 10 ಗಂಟೆ ಮತ್ತು ಹೆಚ್ಚುವರಿ ಕೆಲಸದ ಅವಧಿಯನ್ನು ದಿನಕ್ಕೆ ಗರಿಷ್ಠ 12 ಗಂಟೆಗಳಿಗೆ ವಿಸ್ತರಿಸಲು ಸರ್ಕಾರ ಮುಂದಾಗಿದೆ. ಆ ಮೂಲಕ, ಮೂರು ತಿಂಗಳಲ್ಲಿ ಹೆಚ್ಚುವರಿ ಕೆಲಸದ ಗರಿಷ್ಠ ಮಿತಿಯು 50ರಿಂದ 144 ಗಂಟೆಗೆ ಹೆಚ್ಚಳವಾಗಲಿದೆ.
ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಛತ್ತೀಸ್ಗಢಗಳು ಈಗಾಗಲೇ ಇದೇ ರೀತಿಯ ಬದಲಾವಣೆಗಳನ್ನು ಪರಿಚಯಿಸಿರುವ ಪ್ರಮುಖ ರಾಜ್ಯಗಳಲ್ಲಿ ಸೇರಿವೆ ಎಂದು ಇಲಾಖೆ ತಿಳಿಸಿದೆ. ಇತ್ತೀಚೆಗೆ, ಆಂಧ್ರಪ್ರದೇಶ ಸಚಿವ ಸಂಪುಟವು ದಿನಕ್ಕೆ ಕೆಲಸದ ಸಮಯವನ್ನು 10ಕ್ಕೆ ಹೆಚ್ಚಿಸಲು ಅನುಮೋದನೆ ನೀಡಿದೆ .













