(ನ್ಯೂಸ್ ಕಡಬ) newskadaba.com ಕಡಬ, ಜ.28. ಖಾಸಗಿ ಗುಡ್ಡದಲ್ಲಿ ಮೇಯಲು ಬಿಟ್ಟಿದ್ದ ಎರಡು ಆಡುಗಳನ್ನು ಕೊಂದು ಕಳ್ಳತನಕ್ಕೆ ಯತ್ನಿಸುತ್ತಿದ್ದ ವೇಳೆ ಕಳ್ಳರು ಸ್ಥಳೀಯರ ಕೈಗೆ ಸಿಕ್ಕಿಬಿದ್ದ ಘಟನೆ ಸೋಮವಾರ ರಾತ್ರಿ ಕಡಬ ಠಾಣಾ ವ್ಯಾಪ್ತಿಯ ಐತ್ತೂರು ಗ್ರಾಮದ ಕೊಡೆಂಕೀರಿ ಎಂಬಲ್ಲಿ ನಡೆದಿದೆ.

ಸೋಮವಾರ ರಾತ್ರಿ ವೇಳೆ ಕೊಡೆಂಕೀರಿ ನಿವಾಸಿ ಜಾರ್ಜ್ ಕುಟ್ಟಿ ಎಂಬವರಿಗೆ ಸೇರಿದ ಆಡುಗಳನ್ನು ಕದಿಯುವ ಉದ್ದೇಶದಿಂದ ಬೈಕಿನಲ್ಲಿ ಬಂದ ನಾಲ್ವರು ಆರೋಪಿಗಳು ಗುಡ್ಡೆಯಲ್ಲಿ ಕೊಂದು ಆ ಬಳಿಕ ಆಂಬ್ಯುಲೆನ್ಸ್ ವಾಹನದಲ್ಲಿ ಸಾಗಾಟಕ್ಕೆ ತಯಾರಿ ನಡೆಸುತ್ತಿದ್ದ ವೇಳೆ ಸ್ಥಳೀಯ ಮಹಿಳೆಯೋರ್ವರು ಗಮನಿಸಿ ಬೊಬ್ಬೆ ಹೊಡೆದಿದ್ದು, ಈ ವೇಳೆ ಬೈಕನ್ನು ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಬೈಕಿನ ಜಾಡು ಹಿಡಿದ ಸ್ಥಳೀಯರು ಆರೋಪಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಿಸಿದಾಗ ಆಡನ್ನು ಕಳವುಗೈಯಲು ಯತ್ನಿಸಿರುವುದು ಬಯಲಾಗಿದ್ದು, ಆ ಬಳಿಕ ಪರಿಹಾರ ನೀಡುವುದರ ಮೂಲಕ ಪ್ರಕರಣ ರಾಜಿಯಲ್ಲಿ ಮುಗಿದಿರುವುದಾಗಿ ತಿಳಿದುಬಂದಿದೆ.













