(ನ್ಯೂಸ್ ಕಡಬ) newskadaba.com ನವದೆಹಲಿ, ಅ.28. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಭಾನುವಾರ ಐರನ್ ಮ್ಯಾನ್ 70.3 ಸವಾಲನ್ನು ಸಮರ್ಥವಾಗಿ ಜಯಿಸಿದ್ದಾರೆ. ಗೋವಾದಲ್ಲಿ ನಡೆದ ಈ ಟ್ರಯತ್ಲಾನ್ ಸ್ಪರ್ಧೆಯಲ್ಲಿ 1.9 ಕಿಲೋಮೀಟರ್ ಈಜು, 90 ಕಿಲೋಮೀಟರ್ ಸೈಕ್ಲಿಂಗ್ ಮತ್ತು 21.1 ಕಿಲೋಮೀಟರ್ ಓಟ ಹೀಗೆ 113 ಕಿಲೋಮೀಟರ್ (70.3 ಮೈಲು) ಕ್ರಮಿಸಬೇಕು. ಇದನ್ನು ಯಶಸ್ವಿಯಾಗಿ ಪೂರೈಸುವ ಮೂಲಕ ತೇಜಸ್ವಿಸೂರ್ಯ ಈ ಸಾಧನೆ ಮಾಡಿದ ಮೊಟ್ಟಮೊದಲ ಸಂಸದ ಎನಿಸಿಕೊಂಡಿದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾಗಿರುವ ತೇಜಸ್ವಿ ಸೂರ್ಯ, ತಮ್ಮ ಈ ವಿಶೇಷ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿಯವರ ‘ಫಿಟ್ ಇಂಡಿಯಾ’ ಚಳವಳಿ ಪ್ರೇರಣೆ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸ್ವತಃ ಎಕ್ಸ್ ನಲ್ಲಿ ಸೂರ್ಯ ಸಾಧನೆಯ ಗುಣಗಾನ ಮಾಡಿದ್ದಾರೆ. “ಶ್ಲಾಘನೀಯ ಸಾಧನೆ! ಇದು ಹಲವು ಮಂದಿ ಯುವಜನರಿಗೆ ಫಿಟ್ನೆಸ್ ಸಂಬಂಧಿತ ಚಟುವಟಿಕೆಗಳಿಗೆ ಸ್ಪೂರ್ತಿಯಾಗಲಿದೆ” ಎಂದು ಮೋದಿ ಬಣ್ಣಿಸಿದ್ದಾರೆ.