(ನ್ಯೂಸ್ ಕಡಬ) newskadaba.com ಕಾಸರಗೋಡು, ಮಾ.12. ಬಾಲ್ಯದಲ್ಲಿ ಶಿಕ್ಷಣ ಪಡೆಯದಿದ್ದರೂ, ಎಳೆಯ ವಯಸ್ಸಿನಲ್ಲಿ ಶಿಕ್ಷಣವನ್ನು ಪಡೆಯಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿ ವೃದ್ಧೆಯೋರ್ವರು ಇದೀಗ ಅಕ್ಷರಾಭ್ಯಾಸವನ್ನು ಮಾಡುತ್ತಿದ್ದಾರೆ.
ಕೇರಳದ ಪಾಲ್ಘಾಟ್ ಜಿಲ್ಲೆಯ ಮುಟ್ಟಂ ನಿವಾಸಿ ದಿ| ಕೃಷ್ಣ ಪಿಳ್ಳೈ ಎಂಬವರ ಪತ್ನಿ 96 ರ ಹರೆಯದ ಕಲ್ಯಾಣಿ ಅಮ್ಮ ತನ್ನ ಬಾಲ್ಯದಲ್ಲಿ ನಾಲ್ಕನೇ ತರಗತಿಗರ ತಿಲಾಂಜಲಿ ಇಟ್ಟಿದ್ದರು. ನಂತರದ ದಿನಗಳಲ್ಲಿ ಅಕ್ಷರಗಳನ್ನು ಹಾಗೂ ಮಗ್ಗಿಯನ್ನು ಕಲಿತಿದ್ದರೂ ಮದುವೆಯ ನಂತರ ಸಂಸಾರದ ಹೊರೆಯನ್ನು ತಲೆಮೇಲೆ ಎಳೆದುಕೊಂಡು ಕಲಿಕೆಯ ಆಸೆಗೆ ತಣ್ಣೀರು ಬಿದ್ದಿತ್ತು. ತನ್ನ ಕಿರಿಯ ಮಗಳು ಕೂಡಾ ಅರ್ಧಕ್ಕೇ ಶಿಕ್ಷಣವನ್ನು ನಿಲ್ಲಿಸಿ ಕಳೆದ ಎರಡು ವರ್ಷಗಳ ಹಿಂದೆ ಸಾಕ್ಷರತಾ ಮಿಷನ್ ಮೂಲಕ 10 ನೇ ತರಗತಿಯಲ್ಲಿ ತೇರ್ಗಡೆಯಾಗಿದ್ದರು. ಇದರಿಂದ ಸ್ಪೂರ್ತಿ ಪಡೆದ ಕಲ್ಯಾಣಿ ಅಮ್ಮ ಇದೀಗ ಸಾಕ್ಷರತಾ ಮಿಷನ್ ಮೂಲಕ ಅಕ್ಷರಾಭ್ಯಾಸ ಮಾಡುತ್ತಿದ್ದಾರೆ. ಅಲ್ಲದೆ 10 ನೇ ತರಗತಿಯಲ್ಲಿ ತೇರ್ಗಡೆಯಾಗುವ ಆಶಾಭಾವನೆಯನ್ನು ಹೊಂದಿದ್ದಾರೆ. ಕಲಿಕೆಗೆ ವಯಸ್ಸು ಅಡ್ಡಿಯಲ್ಲ ಎನ್ನುವುದನ್ನು ಕಲ್ಯಾಣಿ ಅಮ್ಮ ಸಾಬೀತುಪಡಿಸಿದ್ದಾರೆ.