ಪಾಲಕ್ಕಾಡ್: ತುತ್ತು ಅನ್ನ ಕದ್ದ ಆರೋಪದಲ್ಲಿ ಆದಿವಾಸಿ ಯುವಕನ ಹೊಡೆದು ಸಾಯಿಸಿದ ಸ್ಥಳೀಯರು ► ಘಟನೆಯ ಸಮಗ್ರ ವರದಿ ಕೇಳಿದ ಕೇಂದ್ರ ಸರಕಾರ

(ನ್ಯೂಸ್ ಕಡಬ) newskadaba.com ಪಾಲಕ್ಕಾಡ್‌, ಫೆ.25. ಕೇವಲ ಒಂದು ಕೆಜಿ ಅಕ್ಕಿಯನ್ನು ಕದ್ದ ಆರೋಪದಲ್ಲಿ ಆದಿವಾಸಿ ಜನಾಂಗದ ಯುವಕ ಮಧು ಎಂಬಾತನನ್ನು ಸ್ಥಳೀಯರು ಹೊಡೆದು ಸಾಯಿಸಿದ ಘಟನೆಗೆ ಸಂಬಂಧಪಟ್ಟಂತೆ ಸಮಗ್ರ ವರದಿ ಸಲ್ಲಿಸುವಂತೆ ಕೇಂದ್ರ ಸರಕಾರವು ಕೇರಳ ಸರಕಾರಕ್ಕೆ ಸೂಚನೆ ನೀಡಿದೆ.

30 ವರ್ಷ ಪ್ರಾಯದ ಮಾನಸಿಕವಾಗಿ ಅಸ್ವಸ್ಥನಾಗಿದ್ದ ಆದಿವಾಸಿ ಯುವಕ ಮಧು ಎಂಬಾತನನ್ನು ಪಾಲಕ್ಕಡ್‌ ಸಮೀಪದ ಅಗಳಿ ಎಂಬಲ್ಲಿ ಫೆಬ್ರವರಿ 22 ರಂದು ಅಕ್ಕಿ ಕದ್ದ ಆರೋಪದಲ್ಲಿ ಸ್ಥಳೀಯರು ಹೊಡೆದು ಸಾಯಿಸಿದ್ದರು. ಅಲ್ಲದೆ ವಿಕೃತ ಮೆರೆದಿದ್ದ ಹಂತಕರು ಸೆಲ್ಫಿ ಹಾಗೂ ಹಲ್ಲೆ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ್ದರು. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 16 ಮಂದಿಯನ್ನು ಬಂಧಿಸಲಾಗಿದೆ ಎನ್ನಲಾಗಿದೆ. ಅಲ್ಲದೆ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವುದಾಗಿ ಹೇಳಿದ್ದು, ಮೃತನ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

Also Read  50 ವರ್ಷಗಳ ನಂತರ ಮೊದಲ ಭಾರಿಗೆ ಸಹರಾ ಮರುಭೂಮಿಯಲ್ಲಿ ಪ್ರವಾಹ

ಘಟನೆಯ ಬಗೆಗಿನ ಸಂಪೂರ್ಣ ವಿವರ ಹಾಗೂ ಅಮಾಯಕನ ಕೊಲೆಗೆ ಸಂಬಂಧಪಟ್ಟಂತೆ ಸರಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ವಿಸ್ತೃತವಾದ ವರದಿ ನೀಡುವಂತೆ ಕೇಂದ್ರ ಬುಡಕಟ್ಟು ಜನಾಂಗದ ವ್ಯವಹಾರಗಳ ಖಾತೆ ಸಚಿವ ಜುವಾಲ್‌ ಓರಂರವರು ಕೇರಳ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಸೂಚಿಸಿದ್ದಾರೆ.

error: Content is protected !!
Scroll to Top