“ವಾಹನದ ಕ್ರೇಝಿಗೆ ತಬ್ಬಲಿಯಾಗದಿರಲಿ ಕುಟುಂಬ”; ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗುತ್ತಿರುವ ಮನ ಮುಟ್ಟುವ ಬರಹ- ಕೆ.ಪಿ ಬಾತಿಶ್ ತೆಕ್ಕಾರು

(ನ್ಯೂಸ್ ಕಡಬ) newskadaba.com ಮಾ. 05. ಕಳೆದ ಒಂದು ವಾರಗಳಿಂದ ನಮ್ಮ ಪುತ್ತೂರು ಹಲವಾರು ಅಪಘಾತಗಳ ಸುದ್ದಿಗಳನ್ನೇ ಹೊತ್ತು ತರುತ್ತಿದ್ದು, ಇನ್ನೂ ಚಿಗುರು ಮೀಸೆ ಚಿಗುರೊಡೆಯದ ಹಲವಾರು ಎಳೆ ಪ್ರಾಯದ ಮಕ್ಕಳು ಈ ಅಪಘಾತಗಳಲ್ಲಿ ಬಲಿಯಾಗುತ್ತಿರುವುದು ಖೇದಕರ ಸಂಗತಿ.


ಒಂದು ಕಡೆ ತನ್ನ ಮಕ್ಕಳ ಆಗಮನಕ್ಕಾಗಿ ಕಾಯುತ್ತಿರುವ ಮನೆಗಳಲ್ಲಿ ತನ್ನ ಮಗನನ್ನು ಹೊತ್ತು ಬರುತ್ತಿರುವುದು ಆಂಬುಲೆನ್ಸ್ ಗಳಾಗಿವೆ ಎಂಬ ದುಃಖಕರ ಸನ್ನಿವೇಷಕ್ಕೆ ನಮ್ಮೂರು ಸಾಕ್ಷಿಯಾಗುತ್ತಿದೆ. ಹಲವಾರು ಮರಣಗಳನ್ನು ನೋಡಿರುವ ನಾವುಗಳು ಇನ್ನೂ ಕೂಡ ಎಚ್ಚತ್ತಿಲ್ಲ ಎಂಬುವುದು ಖೇದಕರ. ಟೀನೇಜ್’ಗೆ ಬಂದು ತಲುಪಿದಾಗ ನನ್ನಿಂದ ಎಲ್ಲವೂ ಸಾಧ್ಯ ಎಂಬ ನಮ್ಮ ಚಿಂತನೆಗಳನ್ನು ಬಿಡಬೇಕಿದೆ. ಒಬ್ಬರಿಗಿಂತ ಮತ್ತೊಬ್ಬರ ಅವಸರದ ಚಾಲನೆಗಳು ಹಲವಾರು ಯುವಕರನ್ನು ಶವಾಗಾರಕ್ಕೆ ತಲುಪಿಸಿದೆ.
ತದನಂತರ ತನ್ನ ಮೃತದೇಹ ತುಂಬಿದ ಆಂಬುಲೆನ್ಸ್ ಮನೆ ಅಂಗಳಕ್ಕೆ ತಲುಪುತ್ತಿದ್ದಂತೆ ಕುಟುಂಬಸ್ಥರ ರೋದನೆಗಳು ಮುಗಿಲು ಮುಟ್ಟುವಂತಿರುತ್ತದೆ.

ಜಾಗೃತರಾಗಬೇಕಿದೆ ಪ್ರೀತಿಯ ಸ್ನೇಹಿತರೇ ದ್ವಿಚಕ್ರ ವಾಹನಗಳು ನಮ್ಮ ಅವಶ್ಯಕಷ್ಟೇ ಉಪಯೋಗಿಸಬೇಕಿದೆ.
ನಮ್ಮ ಕ್ರೇಝಿಗಳು ವಾಹನಗಳ ಮೇಲೆ ಬೇಡ, ನಮ್ಮ ಜಾಗೃತಿಗಳನ್ನು ನಾವೇ ಮಾಡಿಕೊಳ್ಳಬೇಕಿದೆ. ಅದು ಇನ್ನೊಬ್ಬರಿಂದ ಸಾಧ್ಯವಿಲ್ಲ.
ನಿಮ್ಮ ಜೀವನಗಳು ಅತ್ಯಮೂಲ್ಯದ್ದಾಗಿದೆ. ಪ್ರತೀ ಬಾರಿ ಬೈಕ್ ಹತ್ತಿ ಹೊರಗಡೆ ಹೋಗುವ ನಿನ್ನ ಪ್ರತಿ ಪ್ರಯಾಣದಲ್ಲಿ ನನ್ನ ಮಗನಿಗೆ ಏನೂ ಆಗದಿರಲಿ ಎಂದು ಮನಸ್ಸು ತುಂಬಿ ಆಶಿಸುವ ತಾಯಿ ತಂದೆಗೆ ನೀನು ಒಂದು ಜಗತ್ತೇ ಆಗಿರುವೆ. ಪ್ರತಿಯೊಬ್ಬ ಪಾಲಕರು ತನ್ನ ಮಕ್ಕಳಿಗೆ ಆಟಿಕೆ ಸಾಮಾನಿನಂತೆ ಮನೆಯಲ್ಲಿರುವ ವಾಹನಗಳನ್ನು ನೀಡಿ ಅವರ ಅಘಾತಗಳಿಗೆ ತಾವು ಕಾರಣವಾಗಬಾರದು. ಈ ಬಗ್ಗೆ ಈಗಲೇ ಜಾಗೃತಿ ವಹಿಸಿದಲ್ಲಿ ನಿಮಗೇ ಒಳಿತು.

ಇತ್ತೀಚೆಗಷ್ಟೇ ನನ್ನ ಗೆಳೆಯನ ಸಂಬಂಧಿ ಯುವಕನೋರ್ವ ಮೃತಪಟ್ಟಿದ್ದು, ಮೃತದೇಹ ಶವಾಗಾರದಲ್ಲಿದೆ ಎಂದು ತಿಳಿದು ನಾನು ಮತ್ತು ಗೆಳೆಯ ಮಂಗಳೂರಿನ ಒಂದು ಖಾಸಗಿ ಆಸ್ಪತ್ರೆಯ ಶವಾಗಾರಕ್ಕೆ ತಲುಪಿದೆವು. ಶವಗಾರದ ಹೊರಗಡೆ ಹಲವು ಮಂದಿ ಕಣ್ಣೀರು ಹಾಕುತ್ತಿದ್ದರು. ನನ್ನ ಸ್ನೇಹಿತ ತನ್ನ ಸಂಬಂಧಿಯ ಹೆಸರು ಹೇಳಿ ಆತನ ಮೃತದೇಹ ತೋರಿಸುವಂತೆ ಕೇಳಿಕೊಂಡ. ಮೃತದೇಹ ನೋಡಿ ಹೊರಗಡೆ ಬರುವಷ್ಟರಲ್ಲಿ ಅಲ್ಲಿ ಮತ್ತೊಂದು ತಂಡವೂ ಇತ್ತು. ಮೆಲ್ಲನೇ ಅವರಲ್ಲಿ ಮಾತಿಗಿಳಿದೆ ಏನು ವಿಷ್ಯ ಎಂದು ಕೇಳಿದೆ? ಯಾರು ಮರಣ ಹೊಂದಿದ್ದು? ಅದಕ್ಕೆ ಆ ಯುವಕ ಹೇಳಿದ ನನ್ನ ತಮ್ಮ ನಿನ್ನೆ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಇವತ್ತು ಮಧ್ಯಾಹ್ನ ನಿಧನ ಹೊಂದಿರುವುದಾಗಿ ತಿಳಿಸಿದ. ಮೊನ್ನೆಯಿಂದ ಕೇಳಿ ಬರುತ್ತಿರುವ ಅಪಘಾತಗಳ ಸರಮಾಲೆಗಳಿಗೆ ಕರಾವಳಿಯೇ ಬೆಚ್ಚಿ ಬಿದ್ದಿದೆ. ಅಪಘಾತದ ಆಘಾತಗಳು ಹಲವಾರು ಕುಟುಂಬಗಳನ್ನು ಬೀದಿಗೆ ತಂದು ನಿಲ್ಲಿಸಿದೆ. ಅಪಘಾತಗಳ ಸರಾಸರಿ ವಯಸ್ಸು ನೋಡಿದರೆ ಬಹುತೇಕ ಅಪಘಾತಕ್ಕೆ ಬಲಿಯಾಗುತ್ತಿರುವುದು ಹದಿಹರೆಯದ ಹುಡುಗರು. ಟೀನ್ ವಯಸ್ಸಿನ ಕ್ರೇಝಿ ಹಲವಾರು ಮನೆಗಳನ್ನು ಕಣ್ಣೀರಿನಲ್ಲಿ ಮುಳುಗಿಸುತ್ತಿರುವುದು ದುರಂತ. ಹಲವಾರು ಕಣ್ಣೀರ ಕಥೆಗಳಿಗೆ ನಮ್ಮೂರು ಸಾಕ್ಷಿಯಾಗುತ್ತಿದೆ. ದಿನನಿತ್ಯ ಕೇಳಿ ಬರುತ್ತಿರುವ ಅಪಘಾತದ ಸರಮಾಲೆಗಳಿಗೆ ಎಳೆ ವಯಸ್ಸಿನ ಯುವಕರೇ ಬಲಿಯಾಗುತ್ತಿದ್ದು ಪೋಷಕರ ಆಕ್ರಂದನಗಳು ಮುಗಿಲು ಮುಟ್ಟುತ್ತಿದೆ. ಮನೆಯಿಂದ ಕೆಲಸಕ್ಕೋ ಅಥವಾ ಇನ್ನಿತರ ಅವಶ್ಯಕಗಳಿಗೆ ಬೈಕ್ ಏರಿ ಹೋಗುವ ತನ್ನ ಮಗನನ್ನು ನಂತರ ತಾಯಿ ಕಂಡದ್ದು ಮರುದಿನ ಮನೆಗೆ ಹೊತ್ತು ತರುವ ಆಂಬುಲೆನ್ಸ್ ನಲ್ಲಾಗಿದೆ.
ಯಾವುದೇ ಪರಿಸ್ಥಿತಿಯಲ್ಲೂ ತನ್ನ ಮಕ್ಕಳ ಚಿತೆಗೆ ಬೆಂಕಿಯಿಡುವ, ತನ್ನ ಕರುಳಕುಡಿಗಳ ಮೃತದೇಹಕ್ಕೆ ಹೆಗಲು ಕೊಡುವ ಒಂದು ಪರಿಸ್ಥಿತಿ ಯಾವೊಬ್ಬ ತಂದೆ ತಾಯಿಗೂ ಯಾವತ್ತಿಗೂ ಬರಬಾರದು. ತನ್ನ ಕಣ್ಣೆದುರಲ್ಲಿ ತನ್ನ ಮಕ್ಕಳ ರಕ್ತ ಸಿಕ್ತ ಮೃತದೇಹ ತಂದಿಡುವ ಸನ್ನಿವೇಶಗಳು ಯಾರು ತಾನೇ ಸಹಿಸಿಯಾರು? ಹೆತ್ತವರಿಗೆ ಅರಗಿಸಿಕೊಳ್ಳಲಾದರೂ ಹೇಗೆ ಸಾಧ್ಯ?

Also Read  ವಿನಾಯಕ ಬಾಳಿಗಾ ಕೊಲೆ ಪ್ರಕರಣ ➤ ದೇಶಪ್ರೇಮಿ ಸಂಘಟನೆಗಳಿಂದ ಕಾಲ್ನಡಿಗೆ ಜಾಥಾ

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಒಂದು ಕೌನ್ಸಿಲಿಂಗ್ ನಲ್ಲಿ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ಒಂದು ಮಾತು ಹೇಳುತ್ತಾರೆ.ಅಪಘಾತದಲ್ಲಿ ಅತೀ ಹೆಚ್ಚು ಬಲಿಯಾಗುತ್ತಿರುವುದು ದ್ವಿಚಕ್ರ ಸವಾರರಾಗಿದ್ದಾರೆ. ಸಣ್ಣ ಎಳೆ ವಯಸ್ಸಿನ ಯುವಕರು 70% ಹೆಲ್ಮೆಟ್ ಧರಿಸದೇ ದ್ವಿಚಕ್ರ ಚಲಾಯಿಸುವುದಾಗಿದೆ ಅಪಘಾತದ ಸಾವಿಗೆ ಕಾರಣ.

ನಾವು ಬಹಳಷ್ಟು ಚಿಂತಿಸಬೇಕಿದೆ…
ಹದಿ ಹರೆಯದ ರಕ್ತ ಕುದಿಯುವ ಹೊತ್ತಿನಲ್ಲಿ ವಾಹನಗಳನ್ನು ಮನ ಬಂದಂತೆ ಓಡಿಸುವುದರಿಂದ ಹಲವು ತಪ್ಪುಗಳು ಸಂಭವಿಸಿ ಇಡೀ ಕುಟುಂಬ ಕಣ್ಣೀರಲ್ಲಿ ಮುಳುಗುತ್ತಿವೆ. ವಾಹನ ಚಾಲನೆಯ ಜಾಗರೂಕತೆ ಮತ್ತು ಪಾಲಿಸಬೇಕಾದ ನಿಯಮಗಳ ಕುರಿತು ಪೋಷಕರು ಮಕ್ಕಳನ್ನು ಎಚ್ಚರಿಸಬೇಕಿದೆ. ಈ ಬಗ್ಗೆ ಮಕ್ಕಳಿಗೆ ತಿಳಿಸದೇ ಹೋದಲ್ಲಿ ನಮ್ಮ ಮಕ್ಕಳ ಮೃತದೇಹಕ್ಕೆ ಹೆಗಲು ಕೊಡುವ ಪರಿಸ್ಥಿತಿ ನಮ್ಮದೂ ಆಗಬಹುದು. ಮನೆಯ ಸಣ್ಣ ಪುಟ್ಟ ಅವಶ್ಯಕತೆಗಳಿಗೆ ಅಪ್ರಾಪ್ತ ವಯಸ್ಸಿನ ಮಕ್ಕಳ ಕೈಗೆ ಬೈಕ್ ನೀಡುವುದನ್ನು ಪೋಷಕರು ನಿಲ್ಲಿಸಬೇಕು. ಲೈಸೆನ್ಸ್ ಇಲ್ಲದೇ ತಮ್ಮ ಮಕ್ಕಳನ್ನು ವಾಹನಗಳನ್ನು ಮುಟ್ಟದಂತೆ ಎಚ್ಚರ ವಹಿಸಬೇಕು. ಇನ್ನು ಯುವಕರಾದ ನಾವುಗಳು ಕೂಡ ಚಿಂತಿಸಬೇಕು. ವಿಪರೀತ ವೇಗದ ಓಡಾಟಕ್ಕೆ ಕಡ್ಡಾಯವಾಗಿ ಬ್ರೇಕ್ ಹಾಕಬೇಕು. ಹೆಲ್ಮೆಟ್ ಇಲ್ಲದೇ ದ್ವಿಚಕ್ರ ಪ್ರಯಾಣ ಮಾಡಲೇಬಾರದು. ಏಕೆಂದರೆ ನಮಗಲ್ಲದಿದ್ದರೂ ನಮ್ಮವರಿಗಾದರೂ ಜೀವಿಸಬೇಕು. ಮನೆ ಮಂದಿ ಪತ್ನಿ, ಮಕ್ಕಳು, ಅಪ್ಪ ಅಮ್ಮ ನಮಗಾಗಿ ಮನೆಯಲ್ಲಿ ಕಾಯುತ್ತಿದ್ದಾರೆ ಎನ್ನುವ ಅರಿವು ಚಾಲನೆಯ ಸಂದರ್ಭದಲ್ಲಿ ಸದಾ ನಮ್ಮನ್ನು ಜಾಗೃತಗೊಳಿಸಬೇಕು. ಅಪಘಾತದ ತೀವ್ರತೆಗಳು ಬಹಳಷ್ಟು ಹೆಚ್ಚಾಗಿವೆ. ಆಂಬುಲೆನ್ಸ್ ಗಳು ಹೊತ್ತು ತರುವ ಮೃತದೇಹಗಳ ಮದ್ಯೆ ಕುಟುಂಬಸ್ಥರ ಕಣ್ಣೀರ ರೋಧನೆಗಳು ನೋಡಲು ಸಾಧ್ಯವಾಗುತ್ತಿಲ್ಲ. ಸೂಕ್ಷ ಜಾಗರೂಕತೆಯ ಚಾಲನೆಗಳಷ್ಟೇ ಹೆಚ್ಚುತ್ತಿರುವ ಅಪಘಾತಗಳನ್ನು ನಿಯಂತ್ರಣಕ್ಕೆ ತರಬಹುದು. ಹೆಚ್ಚುತ್ತಿರುವ ಮರಳುಗಾಡಿಗಳ ಆರ್ಭಟ, ಬಸ್ ಚಾಲಕರು ಸಮಯ ಪಾಲನೆಗಾಗಿ ಮಾಡುವ ಕಸರತ್ತುಗಳು ಇಂದು ಹಲವಾರು ಕುಟುಂಬಗಳನ್ನು
ಬಲಿ ತೆಗೆದುಕೊಂಡಿರುವುದಂತೂ ಸತ್ಯ… ಅತೀ ವೇಗದ ಚಾಲನೆಗಳಿಗೆ ಬ್ರೇಕ್ ಹಾಕಬೇಕಿದೆ. ಪೋಲೀಸರ ಕಣ್ಣು ತಪ್ಪಿಸಲೆಂದು ತಪ್ಪಿಕೊಳ್ಳಲು ಹೋಗಿ ಅಪಘಾತಕ್ಕೀಡಾದ ಉದಾಹರಣೆಗಳೂ ಬಹಳಷ್ಟಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಎಚ್ಚತ್ತುಕೊಳ್ಳಬೇಕಿದೆ. ದಿನನಿತ್ಯ ಕೇಳಿ ಬರುತ್ತಿರುವ ಅಪಘಾತಗಳು ಕೊನೆಯಾಗಲಿ. ಮೃತದೇಹಗಳ ಹೊತ್ತು ತರುವ ಆಂಬುಲೆನ್ಸ್ ಗಳ ಸಂಖ್ಯೆಯೂ ಕಡಿಮೆಯಾಗಲಿ. ಎಲ್ಲರಿಗೂ ಶಾಂತಿಯುತ ಜೀವನ ದೊರಕಲಿ ಎಂದು ಆಶಿಸುತ್ತಾ….

Also Read  ಲಂಚದ ಆರೋಪ ಆಧಾರ ರಹಿತ ► ಬಿಳಿನೆಲೆ ಗ್ರಾ.ಪಂ ಅಧ್ಯಕ್ಷರ ಸ್ಪಷ್ಟನೆ

ಬಾತಿಶ್ ತೆಕ್ಕಾರು

error: Content is protected !!
Scroll to Top