(ನ್ಯೂಸ್ ಕಡಬ) newskadaba.com ನವದೆಹಲಿ, ನ. 24. ಜನಪ್ರಿಯ ಯುಪಿಐ ಪಾವತಿ ಅಪ್ಲಿಕೇಶನ್‌ಗಳಲ್ಲಿ ಒಂದಾಗಿರುವಂತಹ, ಭಾರತದ ಎರಡನೇ ಅತೀ ದೊಡ್ಡ ಯುಪಿಐ ಪಾವತಿ ಅಪ್ಲಿಕೇಶನ್ ಆಗಿರುವ ಗೂಗಲ್ ಪೇಯು ತನ್ನ ಬಳಕೆದಾರರಿಗೆ ಬಿಗ್ ಶಾಕ್ ನೀಡಿದೆ.
ಈ ಹಿಂದೆ ಮೊಬೈಲ್ ರೀಚಾರ್ಜ್ ಮಾಡಬೇಕಿದ್ದಲ್ಲಿ ಫೋನ್ ಪೇ ಮತ್ತು ಪೇಟಿಎಂ ಅಪ್ಲಿಕೇಶನ್ ಗಳು ಪ್ರತೀ ರೀಚಾರ್ಜ್ ಗೆ 2 ರೂ. ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತಿತ್ತು. ಆ ಸಮಯದಲ್ಲಿ ಗೂಗಲ್ ಪೇ ತನ್ನ ಗ್ರಾಹಕರನ್ನು ಸೆಳೆದಿಟ್ಟುಕೊಳ್ಳುವ ಹಿನ್ನೆಲೆಯಲ್ಲಿ ಮೊಬೈಲ್ ರೀಚಾರ್ಜ್ ಗೆ ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತಿರಲಿಲ್ಲ. ಇದೀಗ ಗೂಗಲ್ ಪೇಯು ತನ್ನ ಬಳಕೆದಾರರಿಗೆ ಮೊಬೈಲ್ ರೀಚಾರ್ಜ್‌ಗಳಲ್ಲಿ ಹೆಚ್ಚುವರಿ ಶುಲ್ಕವನ್ನು ವಿಧಿಸಲು ಮುಂದಾಗಿದೆ. ಈ ಮೂಲಕ ಆದಾಯವನ್ನು ಹೆಚ್ಚಿಸುವುದಕ್ಕೆ ಗೂಗಲ್ ಪೇಯು ಸಿದ್ಧವಾಗಿದೆ.
ಗೂಗಲ್‌ಪೇ ಅಪ್ಲಿಕೇಶನ್ ಮೂಲಕ ಹಣ ವರ್ಗಾವಣೆ ಮಾತ್ರವಲ್ಲದೆ, ಡಿಟಿಎಚ್, ವಿದ್ಯುತ್ ಬಿಲ್, ಮೊಬೈಲ್, ನೀರು, ಗ್ಯಾಸ್ ಸಿಲಿಂಡರ್ ಬಿಲ್ ಪಾವತಿ, ಲೋನ್ ಪಾವತಿ ಮೊದಲಾದ ವ್ಯವಹಾರಗಳನ್ನು ಮಾಡಬಹುದು. ಎಲ್ಲಾ ಸೇವೆಗಳು ಇದುವರೆಗೆ ಉಚಿತವಾಗಿದ್ದು, ಇನ್ಮುಂದೆ ಮೊಬೈಲ್ ರೀಚಾರ್ಜ್ ಗೆ ಹೆಚ್ಚುವರಿ ಶುಲ್ಕ ವಿಧಿಸುವುದಾಗಿ ತಿಳಿದುಬಂದಿದೆ. ಆದರೆ ಗೂಗಲ್ ಸಂಸ್ಥೆಯು ಇನ್ನೂ ಅಧಿಕೃತವಾಗಿ ಇದನ್ನು ಘೋಷಿಸಲಿಲ್ಲ. ಕೆಲವೊಂದು ಗ್ರಾಹಕರ ಪ್ರಕಾರ 300 ರೂ. ಮೇಲ್ಪಟ್ಟ ರೀಚಾರ್ಜ್ ಗೆ 3 ರೂ. ಹೆಚ್ಚುವರಿಯಾಗಿ ಕಡಿತ ಮಾಡುತ್ತಿರುವುದಾಗಿ ಬೆಳಕಿಗೆ ಬಂದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ದೂರಿಕೊಂಡಿದ್ದಾರೆ. ಇನ್ನು ವಿದ್ಯುತ್ ಬಿಲ್, ಸೇರಿದಂತೆ ಉಳಿದ ಪೇಮೆಂಟ್ ಗಳು ಉಚಿತವಾಗಿಯೇ ಮುಂದುವರಿಯಲಿವೆ.