(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಫೆ.01. ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಬಹು ನಿರೀಕ್ಷಿತ ಐದನೇ ಮುಂಗಡಪತ್ರವನ್ನು ವಿತ್ತಸಚಿವ ಅರುಣ್ ಜೇಟ್ಲಿ ಅವರು ಗುರುವಾರ ಸಂಸತ್ತಿನಲ್ಲಿ ಮಂಡಿಸಲಿದ್ದು, ಆರ್ಥಿಕ ಹಾಗೂ ಕೃಷಿ ಕ್ಷೇತ್ರಕ್ಕೆ ಮಹತ್ವದ ಕೊಡುಗೆಗಳನ್ನು ನಿರೀಕ್ಷಿಸಲಾಗಿದೆ.
ಪೂರ್ವ ಸಿದ್ಧತೆಯ ಕೊರತೆಗಳ ಹೊರತಾಗಿಯೂ ನೋಟ್ ಬ್ಯಾನ್ ಹಾಗೂ ಸರಕು ಸೇವಾ ತೆರಿಗೆಯನ್ನು ಜಾರಿಗೆ ತಂದಿದ್ದರಿಂದಾಗಿ ಕುಸಿದಿರುವ ಆರ್ಥಿಕ ಮಟ್ಟವನ್ನು ಮೇಲೆತ್ತುವ ಕಠಿಣ ಸವಾಲು ವಿತ್ತ ಸಚಿವ ಅರುಣ್ ಜೈಟ್ಲಿಯವರ ಮುಂದಿದೆ. ಪ್ರಸಕ್ತ ಸಾಲಿನಲ್ಲಿ 8 ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಗಳನ್ನು ಮುಂದಿಟ್ಟುಕೊಂಡು ಗ್ರಾಮೀಣ ಯೋಜನೆಗಳಿಗೆ ಒತ್ತುಕೊಡುವ ಸಾಧ್ಯತೆಯಿದ್ದು, ಕೃಷಿ ಕ್ಷೇತ್ರಕ್ಕೂ ಹೊಸ ರೀತಿಯ ಅನುದಾನ ಕಲ್ಪಿಸುವ ನಿರೀಕ್ಷೆಯಿದೆ. ಒಟ್ಟಿನಲ್ಲಿ ಜಿಎಸ್ಟಿ ಜಾರಿಯಾದ ನಂತರ ಮೊದಲ ಬಾರಿಗೆ ಬಜೆಟ್ ಮಂಡಿಸುತ್ತಿದ್ದು, ದೇಶದ ಆರ್ಥಿಕತೆಯ ಬೆಳವಣಿಗೆಗೆ ಏನೆಲ್ಲಾ ಉಪಾಯಗಳನ್ನು ಮಾಡಿದ್ದಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.