(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.19. ಲಕ್ಷದ್ವೀಪಕ್ಕೆ ತೆರಳುವುದಕ್ಕಾಗಿ ಕರಾವಳಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ರಾತ್ರಿ ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಕೇವಲ ಎರಡು ಗಂಟೆ ಮಾತ್ರ ನಿದ್ದೆ ಮಾಡಿದರು.
ಸೋಮವಾರ ರಾತ್ರಿ ಸುಮಾರು 12:05ರ ವೇಳೆಗೆ ವಾಯುಪಡೆಯ ವಿಶೇಷ ವಿಮಾನದಲ್ಲಿ ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ಕಾರ್ಯಕರ್ತರೊಂದಿಗೆ 3-4 ನಿಮಿಷ ಬೆರೆತು ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿನ ಗೆಲುವಿಗೆ ಸಂಭ್ರಮಾಚರಿಸಿದರು. ಬಳಿಕ ಬಜ್ಪೆ ವಿಮಾನ ನಿಲ್ದಾಣದಿಂದ ವಿಶೇಷ ಭದ್ರತೆಯೊಂದಿಗೆ ಮಂಗಳೂರಿನ ಸರ್ಕ್ಯೂಟ್ ಹೌಸ್‌ಗೆ ಆಗಮಿಸಿದ ಪ್ರಧಾನಿ ಮೋದಿಯವರು ಸುಮಾರು 1 ಗಂಟೆಯ ಹೊತ್ತಿಗೆ ನಿದ್ರಿಸಿದರು.
ಅಲ್ಲಿ ಕೇವಲ 2 ಗಂಟೆ ನಿದ್ರೆ ಮಾಡಿದ ಪ್ರಧಾನಿ ಮೋದಿ 3 ಗಂಟೆ ವೇಳೆಗೆ ಎದ್ದು ಯೋಗಾಸನ, ಸ್ನಾನ, ಧ್ಯಾನ ಮಾಡಿ ಬೆಳಗ್ಗೆ 5 ಗಂಟೆಯಿಂದ ಸುಮಾರು 1 ತಾಸು ದೇಶದ ಪ್ರಮುಖ ವಿದ್ಯಮಾನಗಳ ಬಗ್ಗೆ ಹಿರಿಯ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು. ಬಳಿಕ 7 ಗಂಟೆಗೆ ಉಪಾಹಾರ ಸೇವಿಸಿ ಬೆಳಗ್ಗೆ 7.20ಕ್ಕೆ ಬೆಂಗಾವಲು ಪಡೆಯ ವಾಹನದೊಂದಿಗೆ ನೇರವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಿದರು. ಬೆಳಗ್ಗೆ 8.10ಕ್ಕೆ ವಿಶೇಷ ವಿಮಾನದಲ್ಲಿ ಲಕ್ಷದ್ವೀಪಕ್ಕೆ ತೆರಳಿದರು.