(ನ್ಯೂಸ್ ಕಡಬ) newskadaba.com ಕಡಬ, ಡಿ.13. ಇಸ್ಕಾನ್ ಸಂಸ್ಥೆಯು ಧರ್ಮ ಪ್ರಚಾರಾರ್ಥ ಹಾಗೂ ಹರಿನಾಮದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರಾಷ್ಟ್ರವ್ಯಾಪಿ ಹಮ್ಮಿಕೊಂಡಿರುವ 34 ನೇ ವರ್ಷದ ಅಖಿಲ ಭಾರತ ಪಾದಯಾತ್ರೆ ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕೇಂದ್ರವಾದ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಗುರುವಾರದಂದು ತಲುಪಲಿದೆ.
1984 ರಲ್ಲಿ ಪ್ರಾರಂಭವಾದ ಈ ರಥಯಾತ್ರೆಯು 5 ಬಾರಿ ಭಾರತ ದೇಶವನ್ನು ಪ್ರದಕ್ಷಿಣೆಗೈದಿದ್ದು, 6 ಸಲ ಕರ್ನಾಟಕ ರಾಜ್ಯವನ್ನು ಪ್ರವೇಶಿಸಿದೆ. ದ್ವಾರಕೆಯಿಂದ ಹೊರಟು ಕುರುಕ್ಷೇತ್ರ ಬದರಿನಾಥ, ಹರಿದ್ವಾರ, ವೃಂದಾವನ, ಮಾಯಾಪುರ, ಜಗನ್ನಾಥಪುರಿ, ತಿರುಪತಿ, ಶ್ರೀರಂಗಂ, ರಾಮೇಶ್ವರಂ, ತಿರುವನಂತಪುರಂ, ಗುರುವಾಯೂರು, ಉಡುಪಿ, ಧರ್ಮಸ್ಥಳ ಸೇರಿದಂತೆ ಅನೇಕ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿ ಇದೀಗ ಸುಬ್ರಹ್ಮಣ್ಯ ದೇವಸ್ಥಾನದ ಕಡೆಗೆ ಹೊರಟಿದೆ.
ಪ್ರತಿದಿನ 10 ಕಿಲೋಮೀಟರ್ ದೂರ ಕ್ರಮಿಸುವ ಈ ಪಾದಯಾತ್ರೆಯ ವಿಶೇಷ ಆಕರ್ಷಣೆಯಾಗಿ ಗಜ ಗಾತ್ರದ ಐದು ಎತ್ತುಗಳು ಕಾಣಸಿಗುತ್ತವೆ. ರಾತ್ರಿ ಹೊತ್ತು ಮಠ, ಮಂದಿರಗಳಲ್ಲಿ ತಂಗುವ ಇವರ ತಂಡಕ್ಕೆ ಬುಧವಾರದಂದು ಕಡಬ ತಾಲೂಕಿನ ಬಿಳಿನೆಲೆ ಗೋಪಾಲಕೃಷ್ಣ ದೇವಸ್ಥಾನದಲ್ಲಿ ತಂಗಲು ವ್ಯವಸ್ಥೆ ಕಲ್ಪಿಸಲಾಗಿದೆ.