(ನ್ಯೂಸ್ ಕಡಬ) newskadaba.com ದಕ್ಷಿಣ ಅಫ್ರಿಕಾ, ಜ.09. ಸಾರ್ವಜನಿಕ ಬಸ್‌ವೊಂದರ ಟೈರ್ ಪಂಕ್ಚರ್ ಆಗಿ ಎದುರಿನಿಂದ ಬರುತ್ತಿದ್ದ ಮತ್ತೊಂದು ಬಸ್‌ಗೆ ಢಿಕ್ಕಿ ಹೊಡೆದು ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ 40 ಮಂದಿ ಮೃತಪಟ್ಟ ಹಾಗೂ 85 ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ದಕ್ಷಿಣ ಅಫ್ರಿಕಾದ ಸೆನೆಗಲ್ ದೇಶದ ರಾಜಧಾನಿ ಡಾಕಾರ್‌ನಲ್ಲಿ ವರದಿಯಾಗಿದೆ.
85 ಮಂದಿ ಗಾಯಾಳುಗಳ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು ಮೃತ್ಯುವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ಕಾಫ್ರಿನ್ ಪ್ರದೇಶದ ಗ್ನಿವಿ ಗ್ರಾಮದಲ್ಲಿ ಮುಂಜಾನೆ ವೇಳೆ ಈ ಅಪಘಾತ ಸಂಭವಿಸಿದೆ ಎಂದು ಅಧ್ಯಕ್ಷ ಮ್ಯಾಕಿ ಸಾಲ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಈ ದುರಂತ ಘಟನೆಯಿಂದ ತೀವ್ರ ದುಃಖಿತನಾಗಿದ್ದೇನೆ. ಸಂತ್ರಸ್ತರ ಕುಟುಂಬಗಳಿಗೆ ನನ್ನ ಸಂತಾಪ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ. ಅವರಿಗೆ ಅಗತ್ಯ ವೈದ್ಯಕೀಯ ನೆರವು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿದ್ದಾರೆ ಎಂದು ತಿಳಿದುಬಂದಿದೆ.