(ನ್ಯೂಸ್ ಕಡಬ) newskadaba.com ನವದೆಹಲಿ, ನ.22. ಕೇಂದ್ರ ಸಚಿವ ಸಂಪುಟದಲ್ಲಿ ಪ್ರವಾಸೋದ್ಯಮ ಖಾತೆ ಸಚಿವ ಮತ್ತು ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಖಾತೆ ಸಚಿವರಾಗಿರುವ ಅಲ್ಫೋನ್ಸ್ ಕಣ್ಣಂತಾನಂ ಅವರನ್ನು ವಿಮಾನ ನಿಲ್ದಾಣದಲ್ಲಿ ವೈದ್ಯೆಯೊಬ್ಬರು ತರಾಟೆಗೆ ತೆಗೆದುಕೊಂಡ ಘಟನೆಯ ವೀಡಿಯೋ ಇದೀಗ ವೈರಲ್ ಆಗಿದೆ.
ಸಚಿವರು ಬರುತ್ತಾರೆಂಬ ಕಾರಣಕ್ಕಾಗಿ ಇಂಪಾಲ್ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ ವಿಮಾನದ ಹಾರಾಟವನ್ನು ಕೆಲ ಕ್ಷಣಗಳ ಕಾಲ ವಿಳಂಬ ಮಾಡಲಾಗಿತ್ತು. ಸಚಿವರಿಗಾಗಿ ವಿಮಾನ ವಿಳಂಬ ಮಾಡಿದ್ದಕ್ಕಾಗಿ ಸಿಡಿಮಿಡಿಗೊಂಡ ವೈದ್ಯೆಯೋರ್ವರು ವಿಮಾನ ನಿಲ್ದಾಣದಲ್ಲೇ ಕಣ್ಣಂತಾನಂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಳಂಬವಾದ ಕಾರಣ ತಾನು ಪಾಟ್ನಾ ಕ್ಕೆ ಹೋಗುವ ವಿಮಾನ ಕೈ ತಪ್ಪಿದ್ದು, ಗಂಭೀರ ಸ್ಥಿತಿಯಲ್ಲಿರುವ ಒಬ್ಬ ರೋಗಿಗೆ ಚಿಕಿತ್ಸೆ ನೀಡಲು ನಾನು ಹೋಗುತ್ತಿದ್ದೆ. ಆ ರೋಗಿಯ ಜೀವಕ್ಕೆ ಅಪಾಯವಾದರೆ ಯಾರು ಹೊಣೆ ಎಂಬ ವೈದ್ಯೆಯ ಪ್ರಶ್ನೆಗೆ ಗಲಿಬಿಲಿಗೊಂಡ ಸಚಿವರು ಶಾಂತರಾಗಿ ಶಾಂತರಾಗಿ ಎಂದಷ್ಟೇ ಉತ್ತರಿಸಿದ್ದಾರೆ.
ಇದರ ನಡುವೆಯೇ ಸಚಿವರು ಮುಂದೆ ಹೋಗಲು ಯತ್ನಿಸಿದಾಗ ಅವರ ದಾರಿಗೆ ಅಡ್ಡವಾಗಿ ನಿಂತ ವೈದ್ಯೆ, ಇನ್ನು ಮುಂದೆ ಈ ರೀತಿ ವಿಮಾನ ವಿಳಂಬ ಮಾಡುವುದಿಲ್ಲ ಎಂದು ಬರೆದುಕೊಡಿ ಎಂದು ಒತ್ತಾಯಿಸಿದ್ದಾರೆ. ಸಚಿವರನ್ನು ವೈದ್ಯೆ ತರಾಟೆಗೆ ತೆಗೆದುಕೊಂಡಿರುವ ದೃಶ್ಯ ಇದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.