(ನ್ಯೂಸ್ ಕಡಬ) newskadaba.com ನವದೆಹಲಿ, ನ.09. ಕಡಿಮೆ ಹಣದಲ್ಲಿ ತಿಂಗಳು ಪೂರ್ತಿ ಇಂಟರ್ನೆಟ್ ಮತ್ತು ಉಚಿತ ಕರೆ ಪಡೆದು ಖುಷಿಯಾಗಿದ್ದ ಮೊಬೈಲ್ ಗ್ರಾಹಕರ ಸಂತೋಷ ಹೆಚ್ಚು ದಿನ ಉಳಿಯುವುದು ಅನುಮಾನವಾಗಿದೆ.
ಕಳೆದ ಒಂದು ವರ್ಷದಿಂದ ರೇಸಿಗೆ ಬಿದ್ದಂತೆ ದರ ಇಳಿಸಿದ್ದ ಮೊಬೈಲ್ ನೆಟ್‌ವರ್ಕ್ ಸೇವಾ ಸಂಸ್ಥೆಗಳು, ಇದೀಗ ಬೆಲೆ ಹೆಚ್ಚಿಸುವ ಆಲೋಚನೆಯಲ್ಲಿ ತೊಡಗಿವೆ. ಮೊಬೈಲ್ ನೆಟ್‌ವರ್ಕ್ ಸಂಸ್ಥೆಗಳ ನಡುವೆ ದರ ಸಮರಕ್ಕೆ ನಾಂದಿ ಹಾಡಿದ್ದ ರಿಲಯನ್ಸ್ ಜಿಯೊ ಅಕ್ಟೋಬರ್ ನಲ್ಲಿ ತನ್ನ ಸೇವಾ ದರವನ್ನು 15 ರಿಂದ 20% ಏರಿಸಿರುವ ಕಾರಣ, ಉಳಿದ ಮೊಬೈಲ್ ನೆಟ್‌ವರ್ಕ್ ಸಂಸ್ಥೆಗಳು ತಮ್ಮ ಸೇವಾ ದರ ಏರಿಸಲು ಮುಂದಾಗಿವೆ.
ಕಳೆದ ವರ್ಷ ಮೊಬೈಲ್ ನೆಟ್ ವರ್ಕ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದ ಜಿಯೋ, ತನ್ನ ಅತ್ಯಂತ ಕಡಿಮೆ ದರದಿಂದಾಗಿ ಉಳಿದ ಸಣ್ಣ- ಪುಟ್ಟ ನೆಟ್‌ವರ್ಕ್ ಸಂಸ್ಥೆಗಳು ಮಾರುಕಟ್ಟೆಯಿಂದ ಹೊರಬೀಳುವಂತೆ ಮಾಡಿತ್ತು. ಪ್ರಸ್ತುತ ಮೊಬೈಲ್ ನೆಟ್ ವರ್ಕ್ ಮಾರುಕಟ್ಟೆಯ ಶೇ 90% ಲಾಭ ಜಿಯೊ, ಭಾರತಿ ಏರ್ ಟೆಲ್, ವೊಡಾಫೋನ್ ಮೂರು ಸಂಸ್ಥೆಗಳಲ್ಲಿ ಮಾತ್ರವೇ ಹಂಚಿಕೆಯಾಗುತ್ತಿದೆ.
ಇದೀಗ ಏರ್ ಟೆಲ್ ಮತ್ತು ವೊಡಾಫೋನ್ ಮೊಬೈಲ್ ಕಂಪೆನಿಗಳು ದರಗಳನ್ನು ಏರಿಸುವ ಬಗ್ಗೆ ಚಿಂತನೆ ನಡೆಸಿದ್ದು, ಆ ಮೂಲಕ ಕಳೆದ ವರ್ಷ ಅನುಭವಿದ್ದ ನಷ್ಟವನ್ನು ಈ ವರ್ಷ ಸಮದೂಗಿಸಿಕೊಳ್ಳುವ ಚಿಂತನೆಯಲ್ಲಿವೆ.