(ನ್ಯೂಸ್ ಕಡಬ) newskadaba.com ನವದೆಹಲಿ, ನ.2. ಆಧಾರ್ ನಂಬರ್‌ಗೆ ಫೋನ್ ನಂಬರ್ ಜೋಡಿಸಲು ಇನ್ನು ಮುಂದೆ ಮೊಬೈಲ್ ಅಂಗಡಿಗೆ ತೆರಳಿ ಬಯೋಮೆಟ್ರಿಕ್ ವಿವರ ನೀಡುವ ಅಗತ್ಯವಿಲ್ಲ. ಜನರು ತಮ್ಮ ಮೊಬೈಲ್‌ನಲ್ಲೇ ಒಟಿಪಿ ಮೂಲಕ ಆಧಾರ್‌ಗೆ ಮೊಬೈಲ್ ನಂಬರ್ ಜೋಡಿಸಬಹುದಾಗಿದೆ. ಟೆಲಿಕಾಂ ಇಲಾಖೆ ಡಿಸೆಂಬರ್ 01 ರಿಂದ ಈ ವ್ಯವಸ್ಥೆಯನ್ನು ಜಾರಿಗೆ ತರಲಿದೆ.
ಜನರು ತಮ್ಮ ಆಧಾರ್‌ಕಾರ್ಡ್‌ನಲ್ಲಿ ನೋಂದಣಿಯಾಗಿರುವ ಒನ್ ಟೈಮ್ ಪಾಸ್‌ವರ್ಡ್(ಒಟಿಪಿ) ಬಳಸಿ ತಮ್ಮ ಮೊಬೈಲ್ ಮೂಲಕವೇ ಈ ಕಾರ್ಯ ಮಾಡಬಹುದಾಗಿದೆ. ಇದರ ಜೊತೆಗೆ ಆ್ಯಪ್ ಬಳಸಿ ಅಥವಾ ಇಂಟರ್ಯಾಕ್ಟಿವ್ ವಾಯ್ಸಿ ರೆಸ್ಪಾನ್ಸ್ (ಐವಿಆರ್‌ಎಸ್) ಬಳಸಿಕೊಂಡು ತಮ್ಮ ಮೊಬೈಲ್‌ನಲ್ಲಿ ಮನೆಯಲ್ಲಿಯೇ ಆಧಾರ್‌ಗೆ ಮೊಬೈಲ್ ನಂಬರ್ ಜೋಡಿಸಬಹುದಾಗಿದೆ.
ಅಲ್ಲದೆ ಹಿರಿಯ ನಾಗರಿಕರ ಅನುಕೂಲಕ್ಕಾಗಿ ಮತ್ತು ಅಂಗವೈಕಲ್ಯ ಹಾಗೂ ದೀರ್ಘಾವಧಿಯಿಂದ ಅಸೌಖ್ಯರಾಗಿರುವ ಜನತೆಯ ಅನುಕೂಲಕ್ಕಾಗಿ ದೂರವಾಣಿ ಇಲಾಖೆಯು ಚಂದಾದಾರರ ಮನೆಬಾಗಿಲಲ್ಲೇ ಮರುಪರಿಶೀಲನೆ ಮಾಡುವ ಕುರಿತೂ ಶಿಫಾರಸು ಮಾಡಿದೆ. ಅಲ್ಲದೆ ಚಂದಾದಾರರ ಇ-ಕೆವೈಸಿ ದತ್ತಾಂಶಗಳು ಟೆಲಿಕಾಂ ಸೇವೆ ಒದಗಿಸುವ ಸಂಸ್ಥೆಗಳಿಗೆ ಲಭ್ಯವಾಗಬಾರದು. ಕೇವಲ ಹೆಸರು ಮತ್ತು ವಿಳಾಸ ದೊರೆತರೆ ಸಾಕು ಎಂದೂ ದೂರವಾಣಿ ಇಲಾಖೆ ಆದೇಶಿಸಿದೆ. ದೇಶದ ಯಾವುದೇ ಮೂಲೆಯಲ್ಲಿದ್ದರೂ ಚಂದಾದಾರರು (ಮೊಬೈಲ್ ಸಂಪರ್ಕ ಯಾವ ಸೇವಾ ವ್ಯಾಪ್ತಿಗೆ ಸೇರಿದ್ದರೂ) ತಮ್ಮ ಮೊಬೈಲ್ ನಂಬರ್ ಪರಿಶೀಲನೆ, ಮರುಪರಿಶೀಲನೆ ನಡೆಸಬಹುದಾಗಿದೆ ಎಂದು ಟೆಲಿಕಾಂ ಇಲಾಖೆ ತಿಳಿಸಿದೆ.