(ನ್ಯೂಸ್ ಕಡಬ) newskadaba.com ನವದೆಹಲಿ, ಆ.01. ದೇಶದಲ್ಲಿ ಕೊರೋನಾ ಎರಡನೇ ಅಲೆಯ ತೀವ್ರತೆ ಕಡಿಮೆಯಾಗುತ್ತಿರುವುದರ ನಡುವೆಯೇ ಇದೀಗ ಕೊರೋನಾ ಸೋಂಕಿನಲ್ಲಿ ದಿಢೀರ್ ಏರಿಕೆ ಕಂಡುಬಂದಿದ್ದು, ಮೂರನೇ ಅಲೆಯ ಆರಂಭವೇ ಎನ್ನುವ ಪ್ರಶ್ನೆ ಹುಟ್ಟಿದೆ.
ಆಗಸ್ಟ್ ಎರಡನೇ ವಾರದಲ್ಲಿ ಕೊರೋನಾ ಮೂರನೇ ಅಲೆ ಆರಂಭಗೊಂಡು ಅಕ್ಟೋಬರ್ ವೇಳೆಗೆ ತನ್ನ ಪಾರಮ್ಯ ಮೆರೆಯಲಿದೆ ಎಂದು ಈ ಹಿಂದೆಯೇ ತಜ್ಞರು ಎಚ್ಚರಿಕೆ ನೀಡಿದ್ದರು. ಅದಕ್ಕೆ ಪುರಾವೆ ಎಂಬಂತೆ ಇದೀಗ ಕೇರಳ, ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ತಮಿಳುನಾಡು, ಕರ್ನಾಟಕದಲ್ಲೂ ಕೊರೋನಾ ದಿನೇ ದಿನೇ ವ್ಯಾಪಿಸುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 41,649 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, 593 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಸಾರ್ವಜನಿಕರು ಇನ್ನೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಮತ್ತೆ ಲಾಕ್‍ಡೌನ್ ಮಾಡುವುದು ಅನಿವಾರ್ಯ ಎಂದು ಅಧಿಕಾರಿಗಳು, ಜನ ಪ್ರತಿನಿಧಿಗಳು ಎಚ್ಚರಿಕೆ ನೀಡುತ್ತಲೇ ಇದ್ದಾರೆ.