ಕೇರಳ, ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸುವವರೇ ಎಚ್ಚರ ➤ ವ್ಯಾಕ್ಸಿನ್ ಹಾಕಿಸಿದ್ದರೂ ಕೊರೋನಾ ನೆಗೆಟಿವ್ ವರದಿ ಕಡ್ಡಾಯ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.01. ಕೊರೋನ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳ ಮತ್ತು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಆಗಮಿಸುವವರು ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆದಿದ್ದರೂ 72 ಗಂಟೆಯೊಳಗಿನ ಆರ್‌ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ಕಡ್ಡಾಯಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ನೂತನ ಆದೇಶದಂತೆ ವಿಮಾನ/ರೈಲು/ರಸ್ತೆ (ಬಸ್ ಮತ್ತಿತರ ಖಾಸಗಿ ವಾಹನಗಳ ಮೂಲಕ) ಮಾರ್ಗದಲ್ಲಿ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರು 72 ಗಂಟೆಯೊಳಗೆ ಮಾಡಿಸಿರುವ ಆರ್‌ಟಿಪಿಸಿಆರ್ ಪರೀಕ್ಷೆಯ ನೆಗಟಿವ್ ವರದಿ ಹೊಂದುವುದು ಕಡ್ಡಾಯವಾಗಿದೆ. ಕೇರಳ ಮತ್ತು ಮಹಾರಾಷ್ಟ್ರದಿಂದ ಹೊರಡುವ ಎಲ್ಲಾ ವಿಮಾನಗಳಿಗೂ ಇದು ಅನ್ವಯವಾಗುತ್ತದೆ ಎಂದು ನೂತನ ಆದೇಶದಲ್ಲಿ ತಿಳಿಸಲಾಗಿದೆ. 72 ಗಂಟೆಯೊಳಗೆ ಮಾಡಿಸಿದ ಆರ್‌ಟಿಪಿಸಿಆರ್ ನೆಗೆಟಿವ್ ಟೆಸ್ಟ್ ವರದಿಯನ್ನು ಹೊಂದುವ ಪ್ರಯಾಣಿಕರಿಗೆ ಮಾತ್ರವೇ ಸಂಬಂಧಪಟ್ಟ ವಿಮಾನಯಾನ ಸಂಸ್ಥೆಯವರು ಬೋರ್ಡಿಂಗ್ ಪಾಸ್ ನೀಡಬೇಕು. ರೈಲಿನಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು ಆರ್‌ಟಿಪಿಸಿಆರ್ ನೆಗೆಟಿವ್ ಟೆಸ್ಟ್ ವರದಿಯನ್ನು ಹೊಂದುವುದನ್ನು ರೈಲ್ವೆ ಪ್ರಾಧಿಕಾರವು ಖಚಿತಪಡಿಸಬೇಕು. ಬಸ್‌ಗಳ ಮೂಲಕ ಪ್ರಯಾಣಿಸುವವರು ಈ ವರದಿ ಹೊಂದುವುದನ್ನು ಖಾತ್ರಿಪಡಿಸುವ ಜವಾಬ್ದಾರಿ ಆಯಾ ಬಸ್‌ಗಳ ನಿರ್ವಾಹಕರದ್ದಾಗಿದೆ. ಕೇರಳದಿಂದ ಕರ್ನಾಟಕಕ್ಕೆ ವಿದ್ಯಾಭ್ಯಾಸ, ಕಚೇರಿ ಕೆಲಸ, ವ್ಯಾಪಾರ, ವಹಿವಾಟು ಸೇರಿದಂತೆ ಇತರ ಕಾರಣಗಳಿಗೆ ದಿನಂಪ್ರತಿ ಭೇಟಿ ನೀಡುವವರು ಪ್ರತೀ 15 ದಿನಗಳಿಗೊಮ್ಮೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ವರದಿಯನ್ನು ಹೊಂದುವುದು ಕಡ್ಡಾಯವಾಗಿದೆ ಎಂದು ತಿಳಿಸಲಾಗಿದೆ.

Also Read  ನಾಳೆ ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಬಂದ್ ➤ ಯಾರೂ ಮನೆಯಿಂದ ಹೊರಬರದಂತೆ ಜಿಲ್ಲಾಧಿಕಾರಿ ಆದೇಶ

ಕೇರಳಕ್ಕೆ ಹೊಂದಿಕೊಂಡಿರುವ ಕರ್ನಾಟಕದ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಮೈಸೂರು ಮತ್ತು ಮಹಾರಾಷ್ಟ್ರದ ಗಡಿ ಜಿಲ್ಲೆಗಳಾದ ಬೆಳಗಾವಿ, ವಿಜಾಪುರ, ಕಲಬುರಗಿ, ಬೀದರ್ ಮೂಲಕ ರಾಜ್ಯಕ್ಕೆ ಪ್ರವೇಶಿಸುವ ವಾಹನಗಳ (ಚಾಲಕರು/ಸಹಾಯಕರು/ಪ್ರಯಾಣಿಕರು) ತಪಾಸಣೆಗೆ ಚೆಕ್‌ಪೋಸ್ಟ್‌ಗಳನ್ನು ತೆರೆಯಬೇಕು ಮತ್ತು ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿ ಸೂಕ್ತ ವ್ಯವಸ್ಥೆಗೊಳಿಸಬೇಕು ಎಂದು ಆಯಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಸಾಂವಿಧಾನಿಕ ಕಾರ್ಯಕಾರಿಗಳು/ವೈದ್ಯರು/ವೈದ್ಯಕೀಯ ಸಿಬ್ಬಂದಿ ವರ್ಗ ಮತ್ತು ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಅಲ್ಲದೆ ಕೇರಳದಿಂದ ತುರ್ತು ಸಂದರ್ಭದಲ್ಲಿ (ಕುಟುಂಬದಲ್ಲಿ ಮರಣ ಸಂಭವಿಸಿದಲ್ಲಿ/ವೈದ್ಯಕೀಯ ಚಿಕಿತ್ಸೆ ಇತ್ಯಾದಿ)ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರ ಮಾದರಿಗಳನ್ನು ಪರೀಕ್ಷೆಗಾಗಿ ಕರ್ನಾಟಕದಲ್ಲೇ ಸಂಗ್ರಹಿಸಬೇಕು. ಈ ಪ್ರಯಾಣಿಕರ ಹೆಸರು/ವಿಳಾಸ/ಸಂಪರ್ಕ ಸಂಖ್ಯೆ ಇತ್ಯಾದಿ ಪೂರ್ಣ ವಿವರಗಳನ್ನು ಗುರುತಿನ ಚೀಟಿಯ ಆಧಾರದ ಮೇಲೆ ಪಡೆಯಲು ಮತ್ತು ಆರ್‌ಟಿಪಿಸಿಆರ್ ಪರೀಕ್ಷೆಯ ವರದಿಯ ಆಧಾರದ ಮೇಲೆ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಶಿಷ್ಟಾಚಾರದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

Also Read  ಪೇಟಿಎಂ ಗ್ರಾಹಕರಿಗೆ ಬಿಗ್ ಶಾಕ್ ➤ ಪೇಟಿಎಂ ವೆಬ್ಸೈಟ್, ಅಪ್ಲಿಕೇಶನ್ ಹಾಗೂ ಪಾವತಿಗಳು ಸ್ಥಗಿತ

 

 

 

error: Content is protected !!
Scroll to Top