(ನ್ಯೂಸ್ ಕಡಬ) newskadaba.com ನವದೆಹಲಿ, ಡಿ.28. ಪೆಟ್ರೋಲ್ ಬೆಲೆ ದಿನೇ ದಿನೇ ಪರಿಷ್ಕರಣೆ ಮಾಡುವ ರೀತಿಯಲ್ಲಿಯೇ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪ್ರತಿ ವಾರ ಅಡುಗೆ ಅನಿಲ ಸಿಲಿಂಡರ್ ಬೆಲೆ ಗಳನ್ನು ಪರಿಷ್ಕರಣೆ ಮಾಡಲು ಯೋಚಿಸುತ್ತಿದ್ದು, ತೈಲ ಕಂಪನಿಗಳಿಗೆ ಆಗುವ ನಷ್ಟವನ್ನು ಕಡಿಮೆ ಮಾಡಲು ಈ ಯೋಜನೆ ರೂಪಿಸಿರುವುದಾಗಿ ತಿಳಿದುಬಂದಿದೆ.
ಅಡುಗೆ ಅನಿಲಕ್ಕೆ ಕೊಡಲಾಗುತ್ತಿದ್ದ ಸಬ್ಸಿಡಿಯನ್ನು ಸರ್ಕಾರವು ಈ ವರ್ಷದ ಸೆಪ್ಟೆಂಬರ್ ನಲ್ಲಿ ತೆಗೆದುಹಾಕಿತ್ತು. ತಜ್ಞರ ಪ್ರಕಾರ, ಪೆಟ್ರೋಲಿಯಂ ಕಂಪನಿಗಳು ಕೂಡ ಬೆಲೆ ಏರಿಕೆ ಮಾಡುವ ಹೊಸ ನೀತಿಯನ್ನು ಜಾರಿಗೆ ತರಲು ಆರಂಭಿಸಿವೆಯಾದರೂ, ಈ ಬಗ್ಗೆ ಇನ್ನೂ ಯಾವುದೇ ಘೋಷಣೆ ಮಾಡಿಲ್ಲ. ತೈಲ ಬೆಲೆ ಮತ್ತು ಅಡುಗೆ ಅನಿಲ ದರ ಏರಿಕೆಯಿಂದಾಗಿ ಮಾರುಕಟ್ಟೆಯಲ್ಲಿ ಉಂಟಾಗುವ ನಷ್ಟವನ್ನು ತಡೆಯಬಹುದಾಗಿದೆ ಎನ್ನಲಾಗಿದೆ. ಈಗಾಗಲೇ ದಿನಬಳಕೆಯ ವಸ್ತುಗಳಿಗೆ ಬೆಲೆ ಏರಿಕೆಯಾಗುತ್ತಿರುವುದರಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಇದೀಗ ಅಡುಗೆ ಅನಿಲದ ಬೆಲೆ ಏರಿಕೆಯಾದಲ್ಲಿ ಗಾಯದ ಮೇಲೆ ಬರೆ ಎಳೆದಂತಾಗುವುದರಲ್ಲಿ ಸಂಶಯವಿಲ್ಲ.