(ನ್ಯೂಸ್ ಕಡಬ) newskadaba.com ಉತ್ತರ ಪ್ರದೇಶ, ಅ. 01. ಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಲಿತ ಯುವತಿ ಸಾವನ್ನಪ್ಪಿದ್ದಾಳೆ. ಈ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ವಿಪಕ್ಷಗಳು ಹರಿಹಾಯ್ದಿವೆ.ಬಲರಾಂಪುರ ಜಿಲ್ಲೆಯ 22 ವರ್ಷದ ದಲಿತ ಯುವತಿಯ ಮೇಲೆ ಮಂಗಳವಾರ ಇಬ್ಬರು ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ.
ಆಕೆ ಬಲಾಂಪುರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಯುವತಿಯ ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಇಬ್ಬರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಮಂಗಳವಾರ ಕೆಲಸಕ್ಕೆ ಹೋಗಿದ್ದ ಯುವತಿ ಸಂಜೆ ವಾಪಾಸ್ ಬರಲಿಲ್ಲ. ಆಕೆಯ ಫೋನ್ಗೆ ಎಷ್ಟು ಬಾರಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಆಕೆಯ ಬಗ್ಗೆ ಯಾವುದೇ ಮಾಹಿತಿ ಸಿಗದಿದ್ದಾಗ ಅವರು ಕಂಗಾಲಾಗಿದ್ದರು.
ಇನ್ನೇನು ಪೊಲೀಸ್ ಠಾಣೆಗೆ ದೂರು ನೀಡಬೇಕು ಎನ್ನುವಷ್ಟರಲ್ಲಿ ರಾತ್ರಿ ಆಟೋ ರಿಕ್ಷಾದಲ್ಲಿ ಮನೆಗೆ ಬಂದ ಯುವತಿಯ ಮೈಮೇಲೆ ಗಾಯಗಳಾಗಿತ್ತು. ಆಕೆ ನಿಲ್ಲಲೂ ಆಗದಷ್ಟು ನಿತ್ರಾಣಳಾಗಿದ್ದಳು. ಆಕೆಯ ಕೈಗೆ ಗ್ಲೂಕೋಸ್ ಡ್ರಿಪ್ ಹಾಕಿದ್ದ ಇಂಜೆಕ್ಷನ್ ಹಾಕಲಾಗಿತ್ತು. ಆಕೆಯ ಮನೆಯವರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಆಕೆ ಪ್ರಾಣ ಬಿಟ್ಟಳು ಎಂದು ಯುವತಿಯ ಮನೆಯವರು ದೂರು ನೀಡಿದ್ದಾರೆ.
ಆಕೆಯ ಕುಟುಂಬಸ್ಥರು ನೀಡಿದ ದೂರಿನ ಆಧಾರದಲ್ಲಿ ಇಬ್ಬರು ಯುವಕರನ್ನು ಬಂಧಿಸಲಾಗಿದೆ.ಮೃತಳ ತಾಯಿ ನೀಡಿರುವ ದೂರಿನಲ್ಲಿ, ನನ್ನ ಮಗಳ ಮೇಲೆ ಅತ್ಯಾಚಾರ ನಡೆಸುವ ಮೊದಲು ಆಕೆಗೆ ಇಂಜೆಕ್ಷನ್ ಕೊಡಲಾಗಿದೆ. ಆಕೆ ಮನೆಗೆ ಬರುವಾಗ ಆಕೆಯ ಬೆನ್ನಿನ ಮೂಳೆ ಮತ್ತು ಕಾಲುಗಳು ಮುರಿದಿದ್ದವು. ಆಕೆಯ ಮೇಲೆ ಇನ್ನಿಲ್ಲದ ರೀತಿ ದೌರ್ಜನ್ಯ ನಡೆಸಿ, ಆಟೋ ರಿಕ್ಷಾದಲ್ಲಿ ಮನೆಗೆ ಕಳುಹಿಸಿದ್ದರು. ನನ್ನ ಮಗಳು ಸಾಯುವಾಗ ‘ನನಗೆ ಸಹಿಸಲಾರದಷ್ಟು ನೋವಾಗ್ತಿದೆ ಅಮ್ಮ, ನಾನಿನ್ನು ಬದುಕಲ್ಲ’ ಎಂದು ಹೇಳುತ್ತಲೇ ಪ್ರಾಣ ಬಿಟ್ಟಳು ಎಂದು ಘಟನೆಯನ್ನು ವಿವರಿಸಿದ್ದಾರೆ.