ಹೊಸದಿಲ್ಲಿ, ಎ.21: ದೇಶದಲ್ಲಿ ಕೊರೋನ ಆರ್ಭಟ ಮುಂದುವರಿಯುತ್ತಿರುವ ಬೆನ್ನಲ್ಲೇ ರಾಷ್ಟ್ರಪತಿ ಭವನದಲ್ಲಿ ಒಂದು ಕೋವಿಡ್-19 ಸೋಂಕಿತ ಪ್ರಕರಣ ವರದಿಯಾಗಿದ್ದು ಬೆಚ್ಚಿಬೀಳಿಸಿದೆ. ರಾಷ್ಟ್ರಪತಿ ಭವನದಲ್ಲಿರುವ ಸುಮಾರು 125 ಕುಟುಂಬಗಳ 500 ವ್ಯಕ್ತಿಗಳನ್ನು ಕ್ವಾರಂಟೈನ್ ಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ರಾಷ್ಟ್ರಪತಿ ಭವನದ ಶುಚಿತ್ವ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಸಂಬಂಧಿ ಮಹಿಳೆಗೆ ಕೊರೋನ ಪಾಸಿಟಿವ್ ವರದಿ ಬಂದಿದ್ದು, ಅಧಿಕೃತ ಉದ್ಯೋಗಿಯಲ್ಲದಿದ್ದರೂ ರಾಷ್ಟ್ರಪತಿ ಭವನದ ಸಂಕೀರ್ಣದಲ್ಲೆ ವಾಸಿಸುತ್ತಿದ್ದರು ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಶುಚಿತ್ವ ಕೆಲಸ ಮಾಡುತ್ತಿದ್ದ ಮಹಿಳೆಯ ಸೊಸೆಯ ತಾಯಿ ಈ ಹಿಂದೆ ಕೋವಿಡ್ 19 ಸೋಂಕಿಗೆ ಮೃತಪಟ್ಟಿದ್ದರು. ಅಂತ್ಯಕ್ರಿಯೆಯಲ್ಲಿ ಕುಟುಂಬದ ಹಲವರು ಭಾಗವಹಿಸಿದ್ದು ಹೀಗಾಗಿ ಅವರ ಮನೆಯನ್ನು ಕಳೆದ ಶನಿವಾರದಿಂದ ಸೀಲ್ ಮಾಡಲಾಗಿದ್ದು, ಇಡೀ ಕುಟುಂಬವನ್ನು ಕ್ವಾರಂಟೈನ್ ನಲ್ಲಿಡಲಾಗಿದೆ.
ಅದೇ ದಿನ ಆ ಸಿಬ್ಬಂದಿಯ ಅಕ್ಕಪಕ್ಕದ 30 ಮನೆಗಳ ಮಂದಿಯನ್ನು ತೀವ್ರ ಕ್ವಾರಂಟೈನ್ ನಲ್ಲಿರಿಸಿ ಸರ್ಕಾರದಿಂದಲೇ ಆಹಾರ ಪೂರೈಸಲಾಗುತ್ತಿದೆ. ಇತ್ತೀಚಿನ ಬೆಳವಣಿಗೆಯ ನಂತರ ಮತ್ತೆ 95 ಕ್ಕಿಂತ ಹೆಚ್ಚಿನ ಕುಟುಂಬಗಳನ್ನು ಕ್ವಾರಂಟೈನ್ ಗೊಳಿಸಲಾಗಿದ್ದು, ಯಾರೊಬ್ಬರನ್ನೂ ಮನೆಯಿಂದ ಹೊರಬರದಂತೆ ಸೂಚಿಸಲಾಗಿದೆ.