ಹೊಸದಿಲ್ಲಿ, ಎ.19: ದೇಶದಲ್ಲಿ ಮಾರಕ ಕೊರೋನ ಸೋಂಕು ತಲ್ಲಣ ಸೃಷ್ಟಿಸಿದ್ದು, ದಿನೇ ದಿನೇ ಸೋಂಕು ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಕಠಿಣ ಕ್ರಮಗಳನ್ನು ಅನುಸರಿಸಿದರೂ ಸೋಂಕು ಹರಡುವುದನ್ನು ತಡೆಗಟ್ಟುವುದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಏತನ್ಮಧ್ಯೆ, ದೇಶದಲ್ಲಿ ಕೊರೋನ ಅಟ್ಟಹಾಸ ಮುಂದುವರೆದಿದ್ದು, ಸೋಂಕು ಪೀಡಿತರ ಸಂಖ್ಯೆ 15,707ಕ್ಕೆ ಏರಿಕೆಯಾಗಿದೆ.
ಈ ಕುರಿತಂತೆ ಕೇಂದ್ರದ ಕುಟುಂಬ ಮತ್ತು ಕಲ್ಯಾಣ ಇಲಾಖೆ ಮಾಹಿತಿ ನೀಡಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ 15, 707 ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ. ಇದರೊಂದಿಗೆ ಸದ್ಯಕ್ಕೆ ಸೋಂಕಿತರ ಪೈಕಿ 2,230 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯಕ್ಕೆ 12,969 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ದೇಶದಲ್ಲಿ ಕೊರೋನ ಬಲಿಯಾದವರ ಸಂಖ್ಯೆ 507ಕ್ಕೆ ಏರಿಕೆಯಾಗಿದೆ.
ಇನ್ನು ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿರುವ ಕೆಲವರಲ್ಲಿ ಮತ್ತೆ ಮಾರಕ ಸೋಂಕು ಪತ್ತೆಯಾಗಿದ್ದು, ಮತ್ತಷ್ಟು ಭೀತಿ ತಂದೊಡ್ಡಿದೆ.