ಹೊಸದಿಲ್ಲಿ, ಎ.14: ಕೊರೋನ ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ಜಾರಿಯಲ್ಲಿರುವ ಲಾಕ್‌ಡೌನ್ ಅನ್ನು ಮೇ 3 ರವರೆಗೆ ವಿಸ್ತರಣೆ ಮಾಡಿದ್ದು, ಎಪ್ರಿಲ್ 20 ರಂದು ಲಾಕ್‌ಡೌನ್ ಸಡಲಿಕೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
21 ದಿನಗಳ ಮೊದಲ ಹಂತದ ಲಾಕ್‌ಡೌನ್ ಇಂದು ಮುಕ್ತಾಯವಾದ ಹಿನ್ನೆಲೆ ಅವರು ದೇಶವನ್ನುದ್ದೇಶಿಸಿ ಮಾತನಾಡಿದ್ರು. ನಾವು ಬೇಗನೆ ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಂಡರೂ ಕೊರೋನ ಹರಡುವಿಕೆ ಹೆಚ್ಚುತ್ತಿದೆ. ಹೀಗಾಗಿ ಮೇ 3ರವರೆಗೆ ಲಾಕ್‌ಡೌನ್ ಅನಿವಾರ್ಯವಾಗಿದೆ. ಆದರೆ ಏಪ್ರಿಲ್ 20ರ ನಂತರ ಲಾಕ್‌ಡೌನ್ ಸಡಿಲಿಕೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಎ. 20ರವರೆಗೂ ಎಲ್ಲಾ ಜಿಲ್ಲೆ ಹಾಗೂ ರಾಜ್ಯಗಳಲ್ಲಿ ನಿಯಮಗಳನ್ನ ಎಷ್ಟು ಕಠಿಣವಾಗಿ ಪಾಲಿಸಲಾಗುತ್ತಿದೆ ಎನ್ನುವುದರ ಮೇಲೆ ಕಣ್ಣಿಡಲಾಗುತ್ತದೆ. ಕೊರೋನ ಹಾಟ್ಸ್ಪಾಟ್ ಪ್ರದೇಶಗಳು ಹೆಚ್ಚಾಗಲು ರಾಜ್ಯಗಳು ಬಿಡಬಾರದು. ಆದರೆ ಕೆಲವು ಷರತ್ತುಗಳೊಂದಿಗೆ ಪ್ರಮುಖ ಕೆಲಸಗಳು ಮುಂದುವರಿಸಲು ಅವಕಾಶ ನೀಡಬಹುದು. ಬಡವರು, ಕಾರ್ಮಿಕರ ಕಷ್ಟಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕೊರೊನಾ ಸೋಂಕು ರಹಿತ ಪ್ರದೇಶಗಳಲ್ಲಿ ಎ. 20ರ ನಂತರ ಲಾಕ್‌ಡೌನ್ ಸಡಿಲಿಕೆ ಮಾಡಲಾಗುತ್ತದೆ. ಆದ್ರೆ ಇದಕ್ಕೆ ಷರತ್ತುಗಳು ಇರುತ್ತವೆ. ಲಾಕ್‌ಡೌನ್ ಉಲ್ಲಂಘಿಸಿದ್ರೆ ಎಲ್ಲಾ ಅನುಮತಿ ಕೂಡಲೇ ವಾಪಸ್ ಪಡೆಯಲಾಗುತ್ತದೆ ಎಂದು ಮೋದಿ ಹೇಳಿದ್ದಾರೆ.