ಹೊಸದಿಲ್ಲಿ, ಎ.4: ವೈದ್ಯಕೀಯ ಪದವಿ ಕೋರ್ಸ್ಗಳಿಗೆ ಪ್ರವೇಶ ಬಯಸುವ ಆಕಾಂಕ್ಷಿಗಳು ಬರೆಯಬೇಕಾದ ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ (ನೀಟ್) ಪಠ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಪರೀಕ್ಷೆಗಳನ್ನು ಸಂಘಟಿಸುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ಸ್ಪಷ್ಟಪಡಿಸಿದೆ.
ಪಠ್ಯಕ್ರಮ ಬದಲಾಗಿದೆ ಎಂದು ಸುದ್ದಿ ಹರಿದಾಡುತ್ತಿರುವುದು ಏಜೆನ್ಸಿ ಗಮನಕ್ಕೆ ಬಂದಿದೆ. ಇಂಥ ಸುಳ್ಳು ಸುದ್ದಿಗಳನ್ನು ನಂಬಬಾರದು ಎಂದು ಎಜೆನ್ಸಿ ಮನವಿ ಮಾಡಿದೆ.
ಇಷ್ಟಕ್ಕೂ ಎನ್ಟಿಎ ಪಠ್ಯಕ್ರಮವನ್ನು ನಿರ್ಧರಿಸುವ ಸಂಸ್ಥೆಯಲ್ಲ. ಭಾರತೀಯ ವೈದ್ಯಕೀಯ ಮಂಡಳಿ ರೂಪಿಸುವ ಪಠ್ಯಕ್ರಮದ ಲಿಂಕ್ಅನ್ನು ಮಾತ್ರ ಎನ್ಟಿಎ ವಿದ್ಯಾರ್ಥಿಗಳಿಗೆ ನೀಡುತ್ತದೆ. ವಿದ್ಯಾರ್ಥಿಗಳು mciindia.org ವೆಬ್ಸೈಟ್ನಲ್ಲಿ ನೀಡಲಾಗಿರುವ ಪಠ್ಯಕ್ರಮವನ್ನು ಅನುಸರಿಸಬಹುದು ಎಂದು ತಿಳಿಸಿದೆ.
ಪರೀಕ್ಷೆಯ ಅಧಿಸೂಚನೆಯಲ್ಲೂ ಇದೇ ಲಿಂಕ್ ನೀಡಲಾಗಿದೆ ಎಂದು ಎನ್ಟಿಎ ತಿಳಿಸಿದೆ.
ವಿವರಗಳಿಗಾಗಿ ಹಾಗೂ ಗೊಂದಲಗಳನ್ನು ಪರಿಹರಿಸಿಕೊಳ್ಳಲು ntaneet.nic.in ಅಥವಾ nta.ac.in ವೆಬ್ಸೈಟ್ಗೆ ಭೇಟಿ ನೀಡಬಹುದು. ದೇಶಾದ್ಯಂತ ಕೊರೋನ ಲಾಕ್ಡೌನ್ ಹಿನ್ನೆಲೆಯಲ್ಲಿ ನೀಟ್ ಪರೀಕ್ಷೆಯನ್ನು ಮುಂದೂಡಲಾಗಿದೆ. ಲಾಕ್ಡೌನ್ ನಂತರ ಪರಿಸ್ಥಿತಿಯನ್ನು ಅವಲೋಕಿಸಿ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ತಿಳಿಸಿದೆ.