ಹೊಸದಿಲ್ಲಿ, ಎ.4: ಕೊರೋನ ವೈರಸ್ ಹರಡುವಿಕೆಯನ್ನು ಪರಿಶೀಲಿಸಲು, ಕ್ವಾರಂಟೈನ್ ಸೌಲಭ್ಯಗಳ ಸ್ಥಾಪನೆ ಸಹಿತ ಇತರ ಸೌಲಭ್ಯಗಳನ್ನು ಒದಗಿಸಲು ರಾಜ್ಯ ವಿಪತ್ತು ಅಪಾಯ ನಿರ್ವಹಣಾ ನಿಧಿ(ಎಸ್‌ಡಿಆರ್‌ಎಂಎಫ್)ಅಡಿ ಎಲ್ಲ ರಾಜ್ಯಗಳಿಗೆ 11,092 ಕೋ.ರೂ.ವನ್ನು ಬಿಡುಗಡೆ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಅನುಮೋದನೆ ನೀಡಿದ್ದಾರೆ.
ಗುರುವಾರ ವೀಡಿಯೊ ಕಾನ್ಫರೆನ್ಸ್ ವೇಳೆ ಮುಖ್ಯಮಂತ್ರಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ನಿಧಿಗೆ ಅನುಮೋದನೆ ನೀಡಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
2020-21ರ ಎಸ್‌ಡಿಆರ್‌ಎಂಎಫ್‌ನ ಮೊದಲ ಕಂತಿನ ಮೊದಲ ಪಾಲನ್ನು ಕೇಂದ್ರ ಸರಕಾರ ಮುಂಗಡವಾಗಿ ಬಿಡುಗಡೆ ಮಾಡಿದೆ.
ಈ ನಿಧಿಯನ್ನು ಕ್ವಾರಂಟೈನ್ ವ್ಯವಸ್ಥೆಯನ್ನು ಸ್ಥಾಪಿಸಲು, ಸ್ಯಾಂಪಲ್ ಸಂಗ್ರಹ ಹಾಗೂ ಸ್ಕ್ರೀನಿಂಗ್, ಹೆಚ್ಚುವರಿ ಟೆಸ್ಟಿಂಗ್ ಲ್ಯಾಬ್‌ಗಳ ಸ್ಥಾಪನೆ, ಆರೋಗ್ಯರಕ್ಷಣೆ, ಪುರಸಭೆ, ಪೊಲೀಸ್ ಹಾಗೂ ಅಗ್ನಿ ಶಾಮಕ ಅಧಿಕಾರಿಗಳ ವೈಯಕ್ತಿಕ ರಕ್ಷಣಾ ಸಾಧನೆಗಳ ಖರೀದಿ,ಸರಕಾರಿ ಆಸ್ಪತ್ರೆಗಳಿಗೆ ಥರ್ಮಲ್ ಸ್ಕಾನರ್‌ಗಳು, ವೆಂಟಿಲೇಟರ್‌ಗಳು, ಏರ್ ಪ್ಯೂರಿಫಯರ್‌ಗಳು ಹಾಗೂ ಉಪಭೋಗ್ಯ ವಸ್ತುಗಳ ಖರೀದಿಗೆ ಬಳಸಬಹುದು.