ಹೊಸದಿಲ್ಲಿ, ಮಾ.24: ಕೊರೋನ ವೈರಸ್ ಭೀತಿ ಹಿನ್ನೆಲೆಯಲ್ಲಿ ದೇಶದ ಜನತೆ 21 ದಿನಗಳ ಕಾಲ ಮನೆಯಲ್ಲೇ ಇರುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದ್ದಾರೆ.
ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ವಿಶ್ವದ ಬಹುತೇಕ ರಾಷ್ಟ್ರಗಳು ಕೊರೋನ ವೈರಸ್‌ನಿಂದ ಬಾಧಿತವಾಗಿದೆ. ಇದರಿಂದ ದೇಶವನ್ನು ರಕ್ಷಿಸಿಕೊಳ್ಳಬೇಕೆಂದರೆ ದೇಶದ ಜನತೆ ಇನ್ನು 21 ದಿನಗಳ ಕಾಲ ರಸ್ತೆಗೆ ಇಳಿಯಬೇಡಿ ನಿಮ್ಮಲ್ಲಿ ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದರು.
ಕೊರೋನ ವೈರಸ್ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ಸೂಚನೆಯನ್ನು ನಾಗರಿಕರು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಪ್ರಧಾನಿ, ಇಂದು ಮಧ್ಯರಾತ್ರಿ 12 ಗಂಟೆಯಿಂದ ದೇಶಾದ್ಯಂತ ಸಂಪೂರ್ಣ ಲಾಕ್‌ಡೌನ್ ಘೋಷಿಸಿದ್ದಾರೆ. ನಾವು ಈ ಕ್ಷಣದಿಂದ ಸಂಕಲ್ಪಮಾಡೋಣ. ನಮಗೆ ನಾವೇ ಲಕ್ಷ್ಮಣ ರೇಖೆಯನ್ನು ಹಾಕಿಕೊಂಡು ಮನೆಯಲ್ಲೇ ಇರಬೇಕು ಎಂದು ಹೇಳಿದರು.
ಇಂದು ಮಧ್ಯರಾತ್ರಿಯಿಂದ ದೇಶಾದ್ಯಂತ 21 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಆಗಲಿದೆ. ಇದು ಜನತಾ ಕರ್ಪ್ಯೂಗಿಂತ ಕಠಿಣವಾಗಲಿದೆ. ಒಂದು ರೀತಿಯಲ್ಲಿ ಕರ್ಪ್ಯೂವೇ ಆಗಿರಲಿದೆ. ಇದು ದೇಶದ ಪ್ರತಿ ರಾಜ್ಯ, ಜಿಲ್ಲೆ, ಗ್ರಾಮಗಳಿಗೆ ಅನ್ವಯವಾಗಲಿದೆ ಎಂದರು.
ಈ 21 ದಿನಗಳ ಕಾಲ ನಾವು ಎಚ್ಚರಿಕೆಯಿಂದಿರುವ ಅಗತ್ಯವಿದೆ. ಇಲ್ಲದಿದ್ದಲ್ಲಿ ಭಾರತ 21 ವರ್ಷಗಳ ಕಾಲ ಹಿಂದಕ್ಕೆ ಹೋಗುತ್ತದೆ. ಜನರು ಮನೆಯಿಂದ ಹೊರಗೆ ಹೋಗುವ ಒಂದು ಹೆಜ್ಜೆ ಕೂಡ ಕೊರೋನದಂತಹ ಗಂಭೀರ ಸಮಸ್ಯೆಗೆ ಆಹ್ವಾನ ನೀಡಬಹುದು.