ಹೊಸದಿಲ್ಲಿ, ಮಾ.20: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ದೋಷಿಗಳನ್ನು ಇಂದು ಮುಂಜಾವ ಗಲ್ಲಿಗೇರಿಸಲಾಯಿತು.
ಅಕ್ಷಯ್ ಠಾಕೂರ್ (31), ಪವನ್ ಗುಪ್ತಾ (25), ವಿನಯ್ ಶರ್ಮಾ (26) ಮತ್ತು ಮುಖೇಶ್ ಸಿಂಗ್ (32) ಮರಣದಂಡನೆಗೆ ಕೊರಳೊಡ್ಡುವವರೆಗೂ ಕಾನೂನು ಹೋರಾಟ ನಡೆಸಿ ವಿಫಲರಾಗಿದ್ದರು. ಗಲ್ಲುಶಿಕ್ಷೆಗೆ ಎರಡು ಗಂಟೆ ಬಾಕಿ ಇರುವಾಗ ಸುಪ್ರೀಂಕೋರ್ಟ್ ಕದತಟ್ಟಿದ್ದು, ಅರ್ಜಿಯನ್ನು ವಜಾಗೊಳಿಸಿತ್ತು.
ನಾಲ್ವರು ದೋಷಿಗಳು ಕೊನೆಯ ಯಾವ ಆಸೆಯನ್ನೂ ವ್ಯಕ್ತಪಡಿಸಿಲ್ಲವಾಗಿತ್ತು ಎಂದು ಜೈಲು ಅಧಿಕಾರಿ ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ನಸುಕಿನಲ್ಲಿ ಅರ್ಜಿ ವಜಾಗೊಳಿಸಿದ ನಂತರ ತಮ್ಮ ಕೋರ್ಟ್ ಹಾದಿ ಮಾರ್ಗ ಮುಗಿದಿರುವುದು ಮನಗಂಡಿದ್ದರು. 3.30ಕ್ಕೆ ಅಪರಾಧಿಗಳು ಎದ್ದಿದ್ದರು. ವಧಾ ಸ್ಥಾನಕ್ಕೆ ಕರೆದೊಯ್ಯುವ ಮುನ್ನ ನೀಡಲಾಗಿದ್ದ ಉಪಹಾರ, ಕೊನೆಯ ಊಟವನ್ನು ನಿರಾಕರಿಸಿದ್ದರು. ಸ್ನಾನ ಮಾಡಲು ಕೂಡಾ ನಿರಾಕರಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.
ಕಳೆದ ರಾತ್ರಿಯಿಂದ ಇಡೀ ತಿಹಾರ್ ಜೈಲ್ ಅನ್ನು ಲಾಕ್ ಡೌನ್ ಮಾಡಲಾಗಿತ್ತು. ಶುಕ್ರವಾರ ಮುಂಜಾನೆ 5.30ಕ್ಕೆ ಗಲ್ಲಿಗೇರಿಸುವ ಸಂದರ್ಭದಲ್ಲಿ ಜೈಲು ಸೂಪರಿಟೆಂಡೆಂಟ್, ಡೆಪ್ಯುಟಿ ಸೂಪರಿಟೆಂಡೆಂಟ್, ರೆಸಿಡೆಂಟ್ ಮೆಡಿಕಲ್ ಆಫೀಸರ್, ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಮತ್ತು ಇತರ ಜೈಲು ಅಧಿಕಾರಿಗಳು ಹಾಜರಿದ್ದರು.