ಹೊಸದಿಲ್ಲಿ, ಮಾ.17: ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ.ಮುರಳೀಧರನ್ ತಮಗೂ ಕೊರೋನ ವೈರಸ್ ತಗುಲಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ದಿಲ್ಲಿಯ ತಮ್ಮ ಅಧಿಕೃತ ನಿವಾಸದಲ್ಲಿಯೇ ಸ್ವಯಂ ನಿರ್ಬಂಧ ವಿಧಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.
ಸಚಿವ ಸಭೆಯಲ್ಲಿ ಭಾಗವಹಿಸಿದ್ದ ವೈದ್ಯರೊಬ್ಬರಿಗೆ ಕೊರೋನ ವೈರಸ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸಚಿವರಿಗೂ ಕೊರೋನ ವೈರಸ್ ಭೀತಿ ಉಂಟಾಗಿದ್ದು, ಸ್ವಯಂ ಪ್ರೇರಿತವಾಗಿ ದಿಗ್ಬಂಧನ ವಿಧಿಸಿಕೊಂಡಿದ್ದಾರೆ.
ಮುರಳೀಧರನ್ ಅವರು ಮಾರ್ಚ್ 14ರಂದು ಕೇರಳದ ತಿರುವನಂತಪುರಂನಲ್ಲಿ ನಡೆದ ಸಭೆಯೊಂದರಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸೋಂಕು ಪೀಡಿತ ವೈದ್ಯರನ್ನು ಭೇಟಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ದಿಲ್ಲಿಗೆ ಹಿಂದಿರುಗಿದ ಬಳಿಕ ಸ್ವಯಂಪ್ರೇರಿತರಾಗಿ ದಿಲ್ಲಿಯ ತಮ್ಮ ಮನೆಯಲ್ಲೇ ಪ್ರತ್ಯೇಕ ಕೊಠಡಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಮುರಳೀಧರನ್ ಅವರಿಗೆ ಅವರ ಮನೆಯಲ್ಲಿಯೇ ವೈದ್ಯಕೀಯ ನೆರವು ನೀಡಲಾಗಿದ್ದು, ಸೋಂಕು ತಗುಲಿರುವ ಬಗ್ಗೆ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಪರೀಕ್ಷಾ ವರದಿಗಳು ಬರುವ ತನಕ ಕೊರೋನ ವೈರಸ್ ತಗುಲಿರುವ ಬಗ್ಗೆ ಸ್ಪಷ್ಟಪಡಿಸಲಾಗುವುದಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.