ಭೋಪಾಲ್, ಮಾ.11: ಜ್ಯೋತಿರಾಧಿತ್ಯ ಸಿಂಧಿಯಾ ರಾಜೀನಾಮೆಯಿಂದಾಗಿ ಕಮಲ್‌ನಾಥ್ ಸರಕಾರ ಅಲ್ಪಮತಕ್ಕೆ ಕುಸಿದಿದ್ದು ಮಧ್ಯಪ್ರದೇಶದಲ್ಲಿ ರಾಜಕೀಯ ಹೈಡ್ರಾಮಾ ನಡೆದಿತ್ತು. ಆದರೆ ಸಿಂಧಿಯಾ ಬಿಜೆಪಿ ಸೇರ್ಪಡೆಗೆ ಅವರ ಗುಂಪಿನಲ್ಲೇ ಅಪಸ್ವರ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ನ 19ಕ್ಕೂ ಹೆಚ್ಚು ಶಾಸಕರು ಮಧ್ಯಪ್ರದೇಶದಿಂದ ಬೆಂಗಳೂರಿಗೆ ಬಂದು ವಾಸ್ತವ್ಯ ಹೂಡಿದ್ದಾರೆ. ನಿನ್ನೆ ಸಿಂಧಿಯಾ ಅವರು ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂಬ ವಿಚಾರ ಇದೀಗ ಸಿಂಧಿಯಾ ಕ್ಯಾಂಪ್ ನಲ್ಲಿ ಬಿರುಕಿಗೆ ಕಾರಣವಾಗಿದೆ ಎನ್ನಲಾಗಿದೆ. ಮಧ್ಯಪ್ರದೇಶ ಕಾಂಗ್ರೆಸ್‌ನ ಪ್ರಮುಖ ಮೂಲಗಳ ಪ್ರಕಾರ, ಬೆಂಗಳೂರಿನ 19 ಶಾಸಕರೊಂದಿಗೆ ಪಕ್ಷದ ನಾಯಕರು ಸಂಪರ್ಕದಲ್ಲಿದ್ದು ಸಿಂಧಿಯಾ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿರುವುದಕ್ಕೆ ಕನಿಷ್ಠ 10 ಶಾಸಕರು ಮತ್ತು ಇಬ್ಬರು ಮಂತ್ರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನುಳಿದ 12 ಶಾಸಕರಿಗೆ 1996ರಲ್ಲಿ ತಂದೆ ಮಾಧವರಾವ್ ಬಿಜೆಪಿ ಸೇರುವ ಬದಲು ಹೊಸ ಪಕ್ಷ ಸ್ಥಾಪಿಸಿದಂತೆ ಜ್ಯೋತಿರಾಧಿತ್ಯ ಸಿಂಧಿಯಾ ಸಹ ಮಾಡಲಿ ಎಂಬ ಅಭಿಪ್ರಾಯ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮಾಹಿತಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತೆ ಪುಟಿದೇಳುವ ವಿಶ್ವಾಸ ವ್ಯಕ್ತಪಡಿಸಿದೆ. ಇದೇ ಮಾರ್ಚ್ 16ರಂದು ಮಧ್ಯಪ್ರದೇಶ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕಿದೆ. ಈ ಎಲ್ಲಾ ಬಿಕ್ಕಟ್ಟಿನ ನಂತರವೂ ಕಮಲ್ ನಾಥ್ ಅವರು ಬಹುಮತ ಸಾಬೀತು ಮಾಡಿಯೇ ಸಿದ್ದ ಎಂದು ಹೇಳಿದ್ದಾರೆ.