ಹೊಸದಿಲ್ಲಿ, ಮಾ.7: ಈಶಾನ್ಯ ದಿಲ್ಲಿಯ ಕೋಮುಗಲಭೆಯ ವರದಿ ಪ್ರಸಾರ ಮಾಡಿದ ಆರೋಪದ ಮೇಲೆ ಮಲಯಾಳಂ ಸುದ್ದಿ ವಾಹಿನಿಗಳಾದ ಮೀಡಿಯಾ ಒನ್ ಹಾಗೂ ಏಷ್ಯಾನೆಟ್‌ಗೆ ಎರಡು ದಿನ ಪ್ರಸಾರ ನಿರ್ಬಂಧ ವಿಧಿಸಲಾಗಿದೆ.
ಮುಂದಿನ 48 ಗಂಟೆಗಳ ಕಾಲ ಯಾವುದೇ ಪ್ರಸಾರ ಮಾಡದಂತೆ ಮಲಯಾಳಂನ ಈ ಎರಡು ಸುದ್ದಿ ವಾಹಿನಿಗಳ ಮೇಲೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿರ್ಬಂಧ ವಿಧಿಸಿದೆ.
ಈಶಾನ್ಯ ದಿಲ್ಲಿಯ ಹಿಂಸಾಚಾರವನ್ನು ತಪ್ಪಾಗಿ ವರದಿ ಮಾಡಿದೆ ಎಂಬ ಆರೋಪದ ಮೇಲೆ ಮಲಯಾಳಂ ಸುದ್ದಿ ವಾಹಿನಿಗಳಾದ ಏಷ್ಯಾನೆಟ್ ನ್ಯೂಸ್ ಮತ್ತು ಮೀಡಿಯಾ ಒನ್‌ಗೆ ಕೇಂದ್ರ ಸರಕಾರ 48 ಗಂಟೆಗಳ ಪ್ರಸಾರ ನಿಷೇಧವನ್ನು ಹೇರಿದೆ.
ಈ ವಾಹಿನಿಗಳ ಪ್ರಸಾರ ನಿಷೇಧ ಶುಕ್ರವಾರ ರಾತ್ರಿ 7.30 ರಿಂದ ಜಾರಿಗೆ ಬಂದಿದ್ದು, ಮುಂದಿನ 48 ಗಂಟೆಗಳ ಕಾಲ ಯಾವುದೇ ಕಾರ್ಯಕ್ರಮ ಅಥವಾ ಸುದ್ದಿ ಪ್ರಸಾರ ಮಾಡದಂತೆ ಸೂಚಿಸಲಾಗಿದೆ. ಧರ್ಮ ಅಥವಾ ಸಮುದಾಯಗಳ ಮೇಲಿನ ದಾಳಿಗಳನ್ನು ಪ್ರಸಾರ ಮಾಡುವುದು, ಕೋಮು ವರ್ತನೆಗಳನ್ನು ಉತ್ತೇಜಿಸುವುದು ಮತ್ತು ಹಿಂಸಾಚಾರವನ್ನು ಪ್ರಚೋದಿಸುವುದು, ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಗೆ ವಿರುದ್ಧವಾಗಿ ಮತ್ತು ರಾಷ್ಟ್ರ ವಿರೋಧಿ ವರ್ತನೆಗಳನ್ನು ಉತ್ತೇಜಿಸುವುದನ್ನು ನಿಷೇಧಿಸುವ ಕೇಬಲ್ ಟೆಲಿವಿಷನ್ ನೆಟ್‌ವರ್ಕ್ಸ್ ನಿಯಮಗಳನ್ನು ಉಲ್ಲಂಘಿಸುವುದಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆದೇಶದಲ್ಲಿ ತಿಳಿಸಿದೆ.