ಹೊಸದಿಲ್ಲಿ, ಮಾ.4: ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ತಂದೆಯ ಹತ್ಯೆ ಪ್ರಕರಣದಲ್ಲೂ ಮಾಜಿ ಬಿಜೆಪಿ ಶಾಸಕ ಕುಲದೀಪ್ ಸೆಂಗಾರ್ ದೋಷಿ ಎಂದು ದಿಲ್ಲಿಯ ತೀಸ್ ಹಜಾರಿ ನ್ಯಾಯಾಲಯ ತೀರ್ಪು ನೀಡಿದೆ. ಅತ್ಯಾಚಾರ ಪ್ರಕರಣದಲ್ಲಿ ಸೆಂಗಾರ್ ಈಗಾಗಲೇ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.
2018ರ ಎಪ್ರಿಲ್‌ನಲ್ಲಿ ಸಂತ್ರಸ್ತೆಯ ತಂದೆಗೆ ಸೆಂಗಾರ್ ಸಹೋದರ ಅಟುಲ್ ಸೆಂಗಾರ್ ಮತ್ತು ಸಹಚರರು ಮನಸೋ ಇಚ್ಛೆ ಥಳಿಸಲಾಗಿತ್ತು. ನಂತರ ಪೊಲೀಸರು ಅವರನ್ನು ಆಸ್ಪತ್ರೆಗೆ ಸಾಗಿಸುವ ಬದಲು ಠಾಣೆಗೆ ಕರೆದೊಯ್ದಿದ್ದರು. ಇದಾದ ಎರಡು ದಿನಗಳ ಬಳಿಕ ಅವರು ಠಾಣೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಲದೀಪ್ ಸೆಂಗಾರ್, ಆತನ ಸಹೋದರ ಅಟುಲ್ ಸೆಂಗಾರ್, ಪೊಲೀಸ್ ಠಾಣಾ ಇನ್ ಚಾರ್ಜ್ ಅಶೋಕ್ ಸಿಂಗ್ ಭಡೌರಿಯಾ, ಸಬ್ ಇನ್ಸ್‌ಪೆಕ್ಟರ್ ಕಮ್ಟಾ ಪ್ರಸಾದ್, ಪೇದೆ ಅಮೀರ್ ಖಾನ್ ಸೇರಿದಂತೆ ಇತರೆ 6 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿತ್ತು. ಸದ್ಯ ಕೋರ್ಟ್ ನಾಲ್ಕು ಜನರನ್ನು ಪ್ರಕರಣದಿಂದ ಖುಲಾಸೆಗೊಳಿಸಿದ್ದು, ಕುಲದೀಪ್ ಸೆಂಗಾರ್ ಸೇರಿ ಏಳು ಜನರನ್ನು ಅಪರಾಧಿ ಎಂದು ಹೇಳಿದೆ.