-
ಇದು ಭಾರತದ ಆಂತರಿಕ ವಿಚಾರವೆಂದ ಕೇಂದ್ರ ಸರಕಾರದಿಂದ
ಹೊಸದಿಲ್ಲಿ, ಮಾ.4: ಭಾರತದ ಪೌರತ್ವ ತಿದ್ದುಪಡಿ ಕಾಯ್ದೆ ಸಂಬಂಧ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್‌ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಸ್ಥಿಕೆ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ಜಿನಿವಾದಲ್ಲಿರುವ ಭಾರತೀಯ ಶಾಶ್ವತ ನಿಯೋಗಕ್ಕೆ ತಿಳಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ಭಾರತದ ಆಂತರಿಕ ವಿಚಾರವಾಗಿದ್ದು, ದೇಶದ ಸಂಸತ್ತು ಈ ಬಗ್ಗೆ ಕಾನೂನು ತರುವ ಸ್ವಾಯತ್ತ ಹಕ್ಕನ್ನು ಹೊಂದಿದೆ ಎಂದು ವಿಶ್ವಸಂಸ್ಥೆ ಮಾನವ ಹಕ್ಕು ಆಯೋಗಕ್ಕೆ ತಿರುಗೇಟು ನೀಡಿದೆ.
ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗದ ಹೈ ಕಮಿಷನರ್ ಕಚೇರಿ, ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ನಲ್ಲಿ ಮಧ್ಯಸ್ಥಿಕೆ ವಹಿಸುವ ಕುರಿತು ಅರ್ಜಿ ಸಲ್ಲಿಸಿರುವುದಾಗಿ ಜಿನಿವಾದಲ್ಲಿರುವ ನಮ್ಮ ಶಾಶ್ವತ ನಿಯೋಗಕ್ಕೆ ನಿನ್ನೆ ತಿಳಿಸಿದ್ದಾರೆ. ಭಾರತದ ಸಾರ್ವಭೌಮತ್ವಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಯಾವುದೇ ವಿದೇಶಗಳ ಅಥವಾ ಮೂರನೇ ಸಂಸ್ಥೆ, ವ್ಯಕ್ತಿಗಳ ಮಧ್ಯ ಪ್ರವೇಶದ ಅಗತ್ಯವಿಲ್ಲ ಎಂದು ಭಾರತ ಅಚಲವಾದ ನಂಬಿಕೆ ಹೊಂದಿದೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.
ಸಿಎಎ, ಸಾಂವಿಧಾನಿಕವಾಗಿ ಮಾನ್ಯವಾಗಿದೆ, ಅದು ಸಾಂವಿಧಾನಿಕ ಮೌಲ್ಯಗಳ ಎಲ್ಲಾ ಅವಶ್ಯಕತೆಗಳನ್ನು ಅನುಸರಿಸುತ್ತದೆ ಎಂದು ಭಾರತ ಸ್ಪಷ್ಟವಾದ ನಂಬಿಕೆ ಹೊಂದಿದೆ. ಭಾರತದ ವಿಭಜನೆಯಿಂದ ಆದ ಸಮಸ್ಯೆಯಿಂದ ಮಾನವ ಹಕ್ಕುಗಳ ವಿಷಯಗಳಿಗೆ ಸಂಬಂಧಿಸಿದಂತೆ ಭಾರತದ ರಾಷ್ಟ್ರೀಯ ಬದ್ಧತೆಯ ಪ್ರತಿಬಿಂಬವಾಗಿದೆ ಎಂದು ಅವರು ಹೇಳಿದರು.
ಭಾರತವು ಕಾನೂನಿನ ಆಡಳಿತವನ್ನು ಒಳಗೊಂಡ ಪ್ರಜಾಪ್ರಭುತ್ವ ರಾಷ್ಟ್ರ, ಇಲ್ಲಿ ಎಲ್ಲರಿಗೂ ಅತ್ಯುತ್ತಮ ಗೌರವ ತೋರಿಸುತ್ತಿದ್ದು ಸ್ವತಂತ್ರ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆಯಿದೆ. ನಮ್ಮ ಅಭಿಪ್ರಾಯ ಮತ್ತು ಕಾನೂನುಬದ್ಧವಾದ ಸ್ಥಾನಮಾನವನ್ನು ಸುಪ್ರೀಂ ಕೋರ್ಟ್ ಸಮರ್ಥಿಸುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ಅವರು ಹೇಳಿದ್ದಾರೆ.