ಹೊಸದಿಲ್ಲಿ, ಮಾ.2: ನಿರ್ಭಯಾ ಪ್ರಕರಣದ ಅಪರಾಧಿಗಳಲ್ಲಿ ಓರ್ವನಾದ ಪವನ್ ಗುಪ್ತಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ತಿರಸ್ಕಾರಗೊಳಿಸಿದ್ದು, ನಿರ್ಭಯಾ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಖಚಿತವಾಗಿದೆ.
ದಿಲ್ಲಿಯ ಪಟಿಯಾಲ ಹೌಸ್ ಕೋರ್ಟ್ ಫೆ.17ರಂದು ಹೊಸ ಡೆತ್ ವಾರಂಟ್ ಹೊರಡಿಸಿದ್ದು, ಅದರಂತೆ ಮಾರ್ಚ್ 3ರಂದು ಗಲ್ಲು ನಿಗದಿಯಾಗಿತ್ತು. ಆದರೆ ಹೊಸ ಡೆತ್ ವಾರೆಂಟ್ ಬರುವವರೆಗೆ ಗಲ್ಲು ನೀಡದಂತೆ ಕೋರ್ಟ್ ತಡೆಹಿಡಿದಿದೆ.
ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸುವಂತೆ ಕೋರಿ ಪವನ್ ಗುಪ್ತಾ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ರಾಷ್ಟ್ರಪತಿಯವರು ಕ್ಷಮಾದಾನ ಅರ್ಜಿಯನ್ನೂ ತಿರಸ್ಕಾರ ಮಾಡಿದ್ದು, ಗಲ್ಲು ಶಿಕ್ಷೆ ಖಾಯಂ ಆಗಿದೆ.
ಈವರೆಗೂ ಗಲ್ಲಿನಿಂದ ತಪ್ಪಿಸಲು ಒಂದಲ್ಲಾ ಒಂದು ಪ್ರಯತ್ನ ಮಾಡುತ್ತಿದ್ದ ನಿರ್ಭಯಾ ಅಪರಾಧಿಗಳಾದ ಮುಕೇಶ್ ಕುಮಾರ್ ಸಿಂಗ್, ವಿನಯ್ ಶರ್ಮಾ, ಪವನ್ ಗುಪ್ತಾ, ಅಕ್ಷಯ್ ಕುಮಾರ್‌ಗೆ ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಇನ್ನು ಯಾವುದೇ ಅವಕಾಶ ಇಲ್ಲದಂತಾಗಿದೆ.