-
ಸೆಕ್ಷನ್ 144 ಜಾರಿಗೊಳಿಸಿ ಆದೇಶ
ಹೊಸದಿಲ್ಲಿ, ಫೆ.25: ಈಶಾನ್ಯ ದಿಲ್ಲಿಯಲ್ಲಿ ಹಿಂಸಾಚಾರ ತಾರಕ್ಕೇರಿದ್ದು, ಸಾವಿನ ಸಂಖ್ಯೆ 10ಕ್ಕೇರಿದೆ.
ಕಳೆದ 24 ಗಂಟೆಗಳಲ್ಲಿ 150 ಜನ ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಗುರು ತೇಗ್ ಬಹದ್ದೂರ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಸುನೀಲ್ ಕುಮಾರ್ ತಿಳಿಸಿದ್ದಾರೆ.
ಖಾಜುರಿ ಖಾಸ್ ಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ತುರ್ತು ಕಾರ್ಯಪಡೆ ಪಥಸಂಚಲನ ನಡೆಸಿದ್ದು, ಶಾಂತಿ ಕಾಪಾಡಲು ಪ್ರಯತ್ನ ನಡೆಸಿವೆ. ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಹೇರಲಾಗಿದೆ. ಈಶಾನ್ಯ ದಿಲ್ಲಿಯಲ್ಲಿ ಅರೆಸೇನಾ ಪಡೆಗಳ 35 ತುಕಡಿಗಳನ್ನು ನಿಯೋಜಿಸಲಾಗಿದೆ. ಸೋಮವಾರ ಘರ್ಷಣೆಯಲ್ಲಿ ಮೃತಪಟ್ಟ ನಾಲ್ವರು ನಾಗರಿಕರ ದೇಹಗಳ ಮೇಲೆ ಗುಂಡೇಟಿನ ಕುರುಹುಗಳು ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದರು.
ಗಾಯಾಳುಗಳ ಭೇಟಿ ಮಾಡಿದ ಕೇಜ್ರಿವಾಲ್: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಗುರು ತೇಗ್ ಬಹದ್ದೂರ್ ಆಸ್ಪತ್ರೆಗೆ ತೆರಳಿ ಸೋಮವಾರದ ಗಲಭೆಯಲ್ಲಿ ಗಾಯಗೊಂಡಿದ್ದವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.