-
ಪತ್ರಕರ್ತರ ಮೇಲೆ ಗುಂಡಿನ ದಾಳಿ
-
ಮುಸ್ಲಿಮರ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ
-
150ಕ್ಕೂ ಅಧಿಕ ಮಂದಿ ಗಾಯಾಳು
ಹೊಸದಿಲ್ಲಿ, ಫೆ.25: ಈಶಾನ್ಯ ದಿಲ್ಲಿಯಲ್ಲಿ ಮತ್ತೆ ಹಿಂಸಾಚಾರ ಭುಗಿಲೆದಿದ್ದು, ಪತ್ರಕರ್ತರೊಬ್ಬರಿಗೆ ದುರ್ಷ್ಕಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಅಲ್ಲದೆ ಕಬೀರ್ ನಗರದಲ್ಲಿ ಮುಸ್ಲಿಮರ ಮನೆಯ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.
ಈ ಮಧ್ಯೆ ನಿನ್ನೆಯ ಹಿಂಸಾಚಾರದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮತ್ತಿಬ್ಬರು ಮೃತಪಟ್ಟಿದ್ದು, ಮಡಿದವರ ಸಂಖ್ಯೆ 9ಕ್ಕೇರಿದೆ. 150ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮೌಜ್‌ಪುರದಲ್ಲಿ ಪತ್ರಕರ್ತ ಆಕಾಶ್ ನಪ ಅವರ ಮೇಲೆ ಗುಂಡು ಹಾರಿಸಲಾಗಿದೆ. ಗುಂಡೇಟಿನಿಂದ ಗಾಯಗೊಂಡ ಆಕಾಶ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಎನ್‌ಡಿಟಿವಿಯ ಇಬ್ಬರು ಪತ್ರಕರ್ತರ ಮೇಲೂ ಗಂಭೀರ ಹಲ್ಲೆ ನಡೆಸಲಾಗಿದೆ. ಹಲವು ವಾಹನ, ಅಂಗಡಿ ಹಾಗೂ ಮಸೀದಿಗಳಿಗೆ ಬೆಂಕಿ ಹಚ್ಚಲಾಗಿದ್ದು, ಹಲವು ಕಡೆ ಪೆಟ್ರೋಲ್ ಬಾಂಬ್‌ಗಳನ್ನು ಎಸೆಯಲಾಗಿದೆ.
ದಿಲ್ಲಿಯ ಈಶಾನ್ಯ ಭಾಗದ ಜಫ್ರಾಬಾದ್, ಬ್ರಹಂಪುರಿ ಪ್ರದೇಶಗಳಲ್ಲಿ ಮಂಗಳವಾರ ಬೆಳಗ್ಗೆ ಕಲ್ಲು ತೂರಾಟ, ಗಲಭೆ ನಡೆದ ಘಟನೆ ವರದಿಯಾಗಿದೆ.
ರವಿವಾರದಿಂದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಎರಡು ಗುಂಪುಗಳ ಮಧ್ಯೆ ನಡೆದ ಗಲಭೆಯಲ್ಲಿ ನಿನ್ನೆ ನಾಲ್ವರು ನಾಗರಿಕರು ಮತ್ತು ಓರ್ವ ಹೆಡ್ ಕಾನ್ಸ್ಟೇಬಲ್ ಸೇರಿ ಐವರು ಮೃತಪಟ್ಟಿದ್ದರು.105 ಮಂದಿ ಗಾಯಗೊಂಡಿದ್ದರು. ಮಂಗಳವಾರ ಮತ್ತೆ ಅದೇ ಪ್ರದೇಶದಲ್ಲಿ ಹಿಂಸಾಚಾರ ನಡೆದ ಬಗ್ಗೆ ವರದಿಯಾಗಿದೆ. ಸದ್ಯ ಪರಿಸ್ಥಿತಿ ಉದ್ವಿಗ್ನವಾಗಿದ್ದು ಈಶಾನ್ಯ ದೆಹಲಿಯಿಂದ ತಮಗೆ ನಿರಂತರವಾಗಿ ಹಿಂಸಾಚಾರದ ಬಗ್ಗೆ ಕರೆಗಳು ಬರುತ್ತಿವೆ ಎಂದು ದಿಲ್ಲಿಯ ಪೊಲೀಸರು ಹೇಳಿದ್ದಾರೆ.