-
ಹೊತ್ತಿ ಉರಿಯುತ್ತಿರುವ ದಿಲ್ಲಿಯ ಬೀದಿಗಳು
-
60 ಕ್ಕೂ ಅಧಿಕ ಮಂದಿಗೆ ಗಾಯ
-
ತಾರಕ್ಕೇರಿದ ಹಿಂಸಾಚಾರ
ಹೊಸದಿಲ್ಲಿ, ಫೆ.25: ದಿಲ್ಲಿಯಲ್ಲಿ ಸಿಎಎ ಪರ-ವಿರೋಧಿ ಪ್ರತಿಭಟನಕಾರರ ನಡುವೆ ನಡೆದ ಹಿಂಸಾಚಾರದ ಪರಿಣಾಮ ಪೊಲೀಸ್ ಪೇದೆ ಮತ್ತು ನಾಲ್ವರು ನಾಗರಿಕರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ರವಿವಾರ ನಡೆದ ಹಿಂಸಾಚಾರದಲ್ಲಿ ಕಲ್ಲುತೂರಾಟ ನಡೆದಿದ್ದು, ಅಂಗಡಿ, ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ದುಷ್ಕರ್ಮಿಯೊಬ್ಬ ಪೊಲೀಸರ ಎದುರಲ್ಲೇ ಗುಂಡು ಹಾರಿಸಿದ್ದ. ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದರು.
ಇನ್ನೂ ದಿಲ್ಲಿಯ ಬೀದಿಗಳು ಹೊತ್ತಿ ಉರಿಯುತ್ತಿದ್ದು, ಪರ-ವಿರೋಧಿಗಳ ಮಧ್ಯೆ ಕಲ್ಲು ತೂರಾಟ ಸಾಮಾನ್ಯವಾಗಿದೆ. ಹಿಂಸಾಚಾರದಲ್ಲಿ ಒಬ್ಬ ಪೊಲೀಸ್ ಪೇದೆ ಸಹಿತ ಐದು ಮಂದಿ ಸಾವನ್ನಪ್ಪಿದ್ದಾರೆ. 60 ಕ್ಕೂ ಅಧಿಕ ಮಂದಿ ಗಾಯಗೊಂಡ ಆಸ್ಪತ್ರೆ ಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಗುರು ತೇಜ್ ಬಹದ್ದೂರ್ ಆಸ್ಪತ್ರೆಯ ವೈದ್ಯರಿಗೆ ಗಾಯಗೊಂಡವರ ನಿಖರ ಸಂಖ್ಯೆ ತಿಳಿಯಲು ಸಾಧ್ಯವಾಗಿಲ್ಲ. ಸುಮಾರು 60 ಗಾಯಾಳುಗಳನ್ನು ಸೋಮವಾರ ರಾತ್ರಿಯವರೆಗೆ ಆಸ್ಪತ್ರೆಗೆ ಕರೆತರಲಾಯಿತು. ಇದರಲ್ಲಿ ಹೆಚ್ಚಿನ ಜನರ ಸ್ಥಿತಿ ಚಿಂತಾಜನಕವಾಗಿತ್ತು ಎಂದು ಹೆಸರು ಹೇಳಲು ಬಯಸದ ವೈದ್ಯರ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಹೆಚ್ಚಿನ ಜನರ ಮೈಮೇಲೆ ಗುಂಡೇಟಿನ ಹಾಗೂ ಕಲ್ಲೇಟಿನ ಗಾಯಗಳಿದ್ದವು. ಕೆಲವರಿಗೆ ಇರಿದ ಗಾಯಗಳಿದ್ದವು. ಒಬ್ಬನಿಗೆ ಪೆಟ್ರೋಲ್ ಬಾಂಬ್‌ನಿಂದ ತೀವ್ರ ಸುಟ್ಟಗಾಯಗಳಾಗಿವೆ. ಆಸ್ಪತ್ರೆಯ ಸುತ್ತಲೂ ಕಟ್ಟೆಚ್ಚರ ವಹಿಸಲಾಗಿದ್ದು, ಕೇವಲ ಗಾಯಾಳುಗಳನ್ನು ಮಾತ್ರವೇ ಒಳಗೆ ಬಿಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ಮೃತರ ಸಂಬಂಧಿಕರು ಶವ ಗುರುತಿಸಿ, ಅಗತ್ಯವಾದ ದಾಖಲೆಗಳಿಗೆ ಸಹಿಹಾಕಿದ ಬಳಿಕ ಶವಪರೀಕ್ಷೆ ಮಾಡಲಾಗುತ್ತದೆ. ಬಳಿಕ ಅಧಿಕೃತವಾಗಿ ವೈದ್ಯರು ಸಾವಿನ ಪ್ರಕರಣ ತಿಳಿಸಿತ್ತಾರೆ.