ಭುವನೇಶ್ವರ, ಫೆ.23: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯಿಂದಾಗಿ ಭಾರತಕ್ಕೆ ಯಾವುದೇ ಲಾಭವಿಲ್ಲ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಟ್ರಂಪ್ ಅಮೆರಿಕದ ಆರ್ಥಿಕತೆಗೆ ಪುಷ್ಠಿ ನೀಡುವ ಉದ್ದೇಶದಿಂದ ಭಾರತಕ್ಕೆ ಆಗಮಿಸುತ್ತಿದ್ದಾರೆ. ನಮ್ಮ ದೇಶಕ್ಕೆ ಅವರ ಭೇಟಿಯಿಂದಾಗಿ ಯಾವುದೇ ಲಾಭವಿದೆ ಎಂದು ನನಗೆ ಅನಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೆಲವು ರಕ್ಷಣಾ ಒಪ್ಪಂದಗಳು ಟ್ರಂಪ್ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆಗಬಹುದು. ಅದೂ ಕೂಡ ಅಮೆರಿಕದ ಆರ್ಥಿಕತೆಗೆ ಆಗುವ ಲಾಭದ ದೃಷ್ಟಿಯಿಂದಲ್ಲೇ ಆಗುವುದು. ನಾವು ರಕ್ಷಣಾ ಸಾಮಗ್ರಿಗಳಿಗಾಗಿ ಪಾವತಿ ಮಾಡುತ್ತೇವೆ, ಅವರು ಅದನ್ನು ಉಚಿತವಾಗೇನು ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ, ಟ್ರಂಪ್ ಅಮೆರಿಕದ ರೈತರಿಗೆ ನೆರವು ಮಾಡಿಕೊಡುವ ಉದ್ದೇಶದಿಂದ ಆಗಮಿಸುತ್ತಿದ್ದಾರೆ ಎಂದಿದ್ದಾರೆ.
ನಿಧಾನಗತಿಯ ಭಾರತದ ಆರ್ಥಿಕತೆಗೆ ಉತ್ತೇಜನ ನೀಡುವ ಅಗತ್ಯವಿದೆ ಎಂದು ಇಬ್ಬರೂ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಆರ್ಥಿಕತೆಯ ಉತ್ತೇಜನಕ್ಕೆ ಇಬ್ಬರೂ ಭಿನ್ನ ಸಲಹೆಗಳನ್ನು ನೀಡಿದ್ದಾರೆ. ಜಿಎಸ್‌ಟಿ, ಆದಾಯ ತೆರಿಗೆ ರದ್ದುಗೊಳಿಸಬೇಕು ಎಂದು ಸ್ವಾಮಿ ಸಲಹೆ ನೀಡಿದರೆ, ಮೂಲಸೌಕರ್ಯ ಕ್ಷೇತ್ರದಲ್ಲಿ ಹೆಚ್ಚು ಹೂಡಿಕೆ ಮಾಡಬೇಕು ಮತ್ತು ಅಲ್ಪಾವಧಿ, ದೀರ್ಘಾವಧಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಯೆಚೂರಿ ಸಲಹೆ ನೀಡಿದ್ದಾರೆ.
ಟ್ರಂಪ್ ಅವರು ಸೋಮವಾರದಿಂದ ಎರಡು ದಿನ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ.