ಚೆನ್ನೈ, ಫೆ.16: ಮೇಲ್ಜಾತಿಯ ವ್ಯಕ್ತಿಯೊಬ್ಬರಿಗೆ ಸೇರಿದ ಖಾಲಿ ಜಮೀನಿನಲ್ಲಿ ಮಲವಿಸರ್ಜನೆ ಮಾಡಿದ ಎನ್ನುವ ಕಾರಣಕ್ಕಾಗಿ ದಲಿತ ಯುವಕನೋರ್ವನನ್ನು ಜನರ ಗುಂಪೊಂದು ಥಳಿಸಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ಆಗಿದೆ. ತಮಿಳುನಾಡಿನ ದಕ್ಷಿಣ ಚೆನ್ನೈನ ವಿಲ್ಲುಪುರಂ ಪಟ್ಟಣದಲ್ಲಿ ಘಟನೆ ನಡೆದಿದ್ದು, ಸಂತ್ರಸ್ತನನ್ನು ಶಕ್ತಿವೇಲ್(24) ಎಂದು ಗುರುತಿಸಲಾಗಿದೆ. ಫೆ.12ರಂದು ಘಟನೆ ನಡೆದಿದ್ದು, ಸ್ಥಳೀಯರು ಸೇರಿ ಮಾರಣಾಂತಿಕ ಹಲ್ಲೆ ನಡೆಸಿರುವ ವೀಡಿಯೊ ವೈರಲ್ ಆಗಿದೆ.
ಈತ ವಿಲ್ಲುಪುರಂ ಬಳಿಯ ಪೆಟ್ರೋಲ್ ಬಂಕ್‌ನಲ್ಲಿ ಶಕ್ತಿವೇಲ್ ಕೆಲಸ ಮಾಡುತ್ತಿದ್ದರು. ಘಟನೆ ಸಂಬಂಧ ಸಂತ್ರಸ್ತನ ತಂಗಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಹಲ್ಲೆ ನಡೆಸಿರುವ ವೀಡಿಯೊ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೇಲ್ಜಾತಿಗೆ ಸೇರಿದ ಜಮೀನಿನಲ್ಲಿ ಮಲವಿಸರ್ಜನೆ ಮಾಡಿದ ನಂತರ ಅವನ ಮೇಲೆ ಹಲ್ಲೆ ನಡೆಸಲಾಯಿತು. ಆತ ದಲಿತ ಎಂದು ತಿಳಿದ ಬಳಿಕ ಹಿಂಸಾಚಾರಕ್ಕೆ ತಿರುಗಿದೆ. ತನ್ನನ್ನು ಕಾಪಾಡುವಂತೆ ಸೋದರ ನನಗೆ ಕರೆ ಮಾಡಿದ. ಸ್ಥಳಕ್ಕೆ ಬಂದು ಪೊಲೀಸರ ಸಹಾಯದಿಂದ ಶಕ್ತಿವೇಲ್‌ನನ್ನು ಕಾಪಾಡಿದೆ. ಆದರೆ ಮನೆಗೆ ತಲುಪುವ ಮುನ್ನವೇ ಪ್ರಜ್ಞೆ ಕಳೆದುಕೊಂಡಿದ್ದ ಶಕ್ತಿವೇಲ್, ವೈದ್ಯರು ಬರುವುದಕ್ಕೂ ಮುನ್ನವೇ ಕೊನೆಯುಸಿರೆಳೆದಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ.
ಕೊಲೆ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿರುದ್ಧದ ದೌರ್ಜನ್ಯಗಳ ತಡೆಗಟ್ಟುವಿಕೆ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಶುಕ್ರವಾರ ಏಳು ಜನರನ್ನು ಬಂಧಿಸಿದ್ದಾರೆ. ದಲಿತ ಸಂಘಟನೆಯ ವಿಸಿಕೆ ನಾಯಕ ತಿರುಮಾವಳನ್ ದುಃಖಿತ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದು, ಅಪರಾಧಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.