ಹೊಸದಿಲ್ಲಿ, ಫೆ.14: ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳನ್ನು ಪ್ರತ್ಯೇಕವಾಗಿ ಗಲ್ಲಿಗೇರಿಸುವ ಕುರಿತು ಕೇಂದ್ರ ಸರಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸುತ್ತಿದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಆರ್. ಭಾನುಮತಿ ತೀರ್ಪು ಓದುತ್ತಲೇ ಕುಸಿದು ಬಿದ್ದ ಪ್ರಕರಣ ಶುಕ್ರವಾರ ನಡೆದಿದೆ.
ಕೇಂದ್ರ ಸರಕಾರ ಸಲ್ಲಿಸಿದ್ದ ಅರ್ಜಿ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ಇಂದು ಈ ಕುರಿತು ತನ್ನ ತೀರ್ಪು ನೀಡಿತು. ತೀರ್ಪು ಓದುತ್ತಿದ್ದಾಗ ನ್ಯಾಯಮೂರ್ತಿ ಆರ್ .ಭಾನುಮತಿ ಅವರು ಅನಾರೋಗ್ಯಕ್ಕೀಡಾಗಿ ಕುಸಿದು ಬಿದ್ದರು.
ತೀರ್ಪು ಓದುತ್ತಿದ್ದಾಗ ದಿಢೀರ್ ಪ್ರಜ್ಞಾಹೀನರಾದ ಭಾನುಮತಿ ಕುರ್ಚಿಯಿಂದ ಕುಸಿದರು. ಕೆಲ ಕ್ಷಣಗಳ ಕಾಲ ಮತ್ತೆ ಪ್ರಜ್ಞೆ ಪಡೆದ ಅವರನ್ನು ಕೂಡಲೇ ವೀಲ್ ಚೇರ್ ಮೂಲಕ ಪ್ರತ್ಯೇಕ ಕೊಠಡಿಗೆ ಕರೆದೊಯ್ದು, ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು.
ಬಳಿಕ ಮಾತನಾಡಿದ ಮತ್ತೋರ್ವ ನ್ಯಾಯಮೂರ್ತಿ ಎಎಸ್ ಬೋಪಣ್ಣ ಅವರ ಈ ಅರ್ಜಿಯ ತೀರ್ಪನ್ನು ನ್ಯಾಯಮೂರ್ತಿಗಳ ಚೇಂಬರ್ ನಲ್ಲೇ ಘೋಷಣೆ ಮಾಡಲಾಗುತ್ತದೆ ಎಂದು ಹೇಳಿದರು.